-->

ಪತಿಯ ಮೇಲಿನ ಕೋಪಕ್ಕೆ ಹೆತ್ತ ಮಗುವನ್ನೇ ಹತ್ಯೆ ಮಾಡಿದ ಪಾಪಿ ತಾಯಿ - ತಂದೆಯಿಂದ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಸಂಸ್ಕಾರ

ಪತಿಯ ಮೇಲಿನ ಕೋಪಕ್ಕೆ ಹೆತ್ತ ಮಗುವನ್ನೇ ಹತ್ಯೆ ಮಾಡಿದ ಪಾಪಿ ತಾಯಿ - ತಂದೆಯಿಂದ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಸಂಸ್ಕಾರ


ಬೆಂಗಳೂರು: ಪತಿಯ ಮೇಲಿನ ಕೋಪಕ್ಕೆ ಸ್ಟಾರ್ಟ್ ಅಪ್ ಕಂಪೆನಿಯೊಂದರ ಸಿಇಒ ಸುಚನಾ ಸೇಠ್(39) ಎಂಬಾಕೆ ತನ್ನ ನಾಲ್ಕು ವರ್ಷದ ಮಗುವನ್ನೇ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯೂರಿನಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಮುಗಿದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಯಲ್ಲಿ ಮಗುವಿನ ತಂದೆ ವೆಂಕಟರಮಣ್ ಅವರು ಭಾಗಿಯಾಗಿದ್ದಾರೆ. ಚಿತ್ರದುರ್ಗದ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಜ.9ರಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮಗುವಿನ ಮೃತದೇಹವನ್ನು ಮಂಗಳವಾರ ಮಧ್ಯರಾತ್ರಿ 1:45ಕ್ಕೆ ಐಮಂಗಲ ಪೊಲೀಸ್‌ ಠಾಣೆಯಿಂದ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು. ಯಶವಂತಪುರ ಬಳಿ ಇರುವ ಬ್ರಿಗೇಡ್ ಗೇಟ್‌ವೇ ರೆಸಿಡೆನ್ಸಿಯಲ್ಲಿರುವ ಮಗುವಿನ ತಂದೆ ನಿವಾಸದ ಬಳಿ ಸಾರ್ವಜನಿಕ ದರ್ಶನದ ಬಳಿಕ ಬೆಳಗ್ಗೆ ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸಲಾಗಿದೆ.

ಈ ಪ್ರಕರಣವನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮಗುವಿನ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಚನಾಳನ್ನು ಗೋವಾ ಪೊಲೀಸರು 6 ದಿನಗಳ ಕಾಲ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಪತಿ ವೆಂಕಟರಮಣ್ ರನ್ನು ಸಹ ಕರೆಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

ಪ್ರಕರಣದ ಹಿನ್ನೆಲೆ: ಪತಿಯ ಮೇಲಿನ ಸಿಟ್ಟಿಗೆ ತಾನೇ ಹೆತ್ತ ಮಗುವನ್ನು ಗೋವಾದ ಹೋಟೆಲೊಂದರಲ್ಲಿ ಸುಚನಾ ಸೇಠ್ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಬಳಿಕ ಸುಚನಾ ಸೇಠ್ ಸೋಮವಾರ ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದ ಈಕೆಯನ್ನು ಗೋವಾ ಪೊಲೀಸರ ಸೂಚನೆ ಮೇರೆಗೆ ಐಮಂಗಲದಲ್ಲಿ ಬಂಧಿಸಲಾಗಿದೆ.

ಗೋವಾದಲ್ಲಿ ಆಕೆ ಹೋಟೆಲ್‌ ಚೆಕ್ ಔಟ್ ಮಾಡಲು ಬೆಂಗಳೂರಿಗೆ ಹೊರಟಾಗ ಹೋಟೆಲ್ ಸಿಬ್ಬಂದಿ ತಮ್ಮ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಸೇಠ್ ಅವರು ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿದ್ದಾಳೆ. ಬಳಿಕ ಟ್ಯಾಕ್ಸಿ ಮೂಲಕ ಬೆಂಗಳೂರಿನತ್ತ ತೆರಳಿದ್ದಾರೆ. ಈ ವೇಳೆ ಹೋಟೆಲ್‌ನವರು ರೂಮ್ ಸ್ವಚ್ಛಗೊಳಿಸಲು ಹೋಗಿದ್ದಾಗ ಅಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ, ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಅದರಂತೆ, ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಪೊಲೀಸ್ ಠಾಣೆ ಬಳಿ ಟ್ಯಾಕ್ಸಿ ಚಾಲಕ ಕಾರು ನಿಲ್ಲಿಸಿದ್ದು ಪೊಲೀಸರು ಆರೋಪಿ ಸುಚನಾ ಸೇಠ್ ರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಕಾರಿನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಸುಚನಾ ಸೇಠ್ ಪತಿ ವೆಂಕಟ ರಾಮನ್ ಚಿತ್ರದುರ್ಗಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸುಚನಾ ಸೇಠ್ ಳನ್ನು ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ ಕರೆದೊಯ್ಯಲಾಗಿದೆ.

ತನ್ನ ಮಾಜಿ ಪತಿಯ ಮೇಲಿನ ವಿರಸದಿಂದಲೇ ಸುಚನಾ ಸೇಠ್ ಮಗುವನ್ನು ಕೊಂದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನ ಪತಿ ಮಗುವಿನೊಂದಿಗೆ ಮಾತನಾಡಬಾರದು ಎಂಬ ಕಾರಣಕ್ಕಾಗಿ ಸುಚನಾ ಸೇಠ್ ಮಗುವನ್ನೇ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ. 2010ರಲ್ಲಿ ವಿವಾಹವಾಗಿದ್ದ ದಂಪತಿಗೆ 2019ರಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರ ನಡುವಿನ ವಿರಸದಿಂದ 2020ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. ಆದರೆ ಪ್ರತಿ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ಕೋರ್ಟ್ ಅನುಮತಿ ನೀಡಿದ್ದರಿಂದ ಇದೇ ವಿಚಾರ ಗಲಾಟೆಗೆ ನಡೆದಿದೆ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article