ಶ್ರೀರಾಮನ ಬಗ್ಗೆ ಅವಹೇಳನ, ಲವ್ ಜಿಹಾದ್ ಗೆ ಉತ್ತೇಜನ - ಅನ್ನಪೂರ್ಣಿ ಸಿನಿಮಾದ ಬಗ್ಗೆ ಆಕ್ಷೇಪ
Thursday, January 11, 2024
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಆದರೆ ಇತ್ತೀಚೆಗೆ ಬಿಡುಗಡೆಯಾಗಿರುವ 'ಅನ್ನಪೂರ್ಣಿ' ಸಿನಿಮಾದಲ್ಲಿ ಶ್ರೀರಾಮನನ್ನೇ ಅಣಕಿಸಿ ಚಿತ್ರೀಕರಿಸಿರುವ ಆರೋಪ ಕೇಳಿಬಂದಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಮೂಲಕ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ದೂರು ದಾಖಲಿಸಿದ್ದಾರೆ.
ಸಿನಿಮಾದಲ್ಲಿ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾಗಿದೆ. ಜೊತೆಗೆ ಸಿನಿಮಾ ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ. 'ಅನ್ನಪೂರ್ಣಿ' ಸಿನಿಮಾ ಇತ್ತೀಚೆಗಷ್ಟೇ ನೆಟ್‌ಫಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ವಿವಾದ ಕೇಳಿಬಂದ ಬೆನ್ನಲ್ಲೇ ನೆಟ್ ಫಿಕ್ಸ್ ನಿಂದ ಸಿನಿಮಾವನ್ನು ತೆಗೆದು ಹಾಕಲಾಗಿದೆ. ವಿವಾದ ಕುರಿತಾಗಿ ಝೀ ಸ್ಟುಡಿಯೋ ಕ್ಷಮೆ ಕೇಳಿ ಹೇಳಿಕೆ ಬಿಡುಗಡೆ ಮಾಡಿದ್ದು ವಿವಾದಿತ ದೃಶ್ಯಗಳನ್ನು ತೆಗೆದುಹಾಕದೆ ಚಿತ್ರವನ್ನು ನೆಟ್ ಫಿಕ್ಸ್ ನಲ್ಲಿ ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ.
ಈ ನಡುವೆ ಹಿಂದೂ ಐಟಿ ಸೆಲ್ ಸಂಸ್ಥಾಪಕ ರಮೇಶ್ ಸೋಲಂಕಿಯವರು ದಕ್ಷಿಣ ಮುಂಬೈನ ಲೋಕಮಾನ್ಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಅವರ ದೂರಿನ ಪ್ರಕಾರ, 'ಅನ್ನಪೂರ್ಣಿ' ಚಿತ್ರವು ಶ್ರೀರಾಮನನ್ನು ಅವಮಾನಿಸುತ್ತದೆ. ಈ ಸಿನಿಮಾವನ್ನು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಸಿನಿಮಾದ ಕೆಲವು ದೃಶ್ಯಗಳನ್ನೂ ತೆಗೆಯಬೇಕೆಂದು ಸೋಲಂಕಿ ಉಲ್ಲೇಖಿಸಿದ್ದಾರೆ.
ಚಿತ್ರದಲ್ಲಿ ದೇವಸ್ಥಾನದ ಅರ್ಚಕರ ಪುತ್ರಿಯಾಗಿರುವ ನಯನತಾರಾ, ಬಿರಿಯಾನಿ ಮಾಡುವ ಮುನ್ನ 'ಹಿಜಾಬ್' ಧರಿಸಿ ನಮಾಜ್ ಮಾಡುವುದನ್ನು ತೋರಿಸುತ್ತದೆ. ಮತ್ತೊಂದು ದೃಶ್ಯದಲ್ಲಿ, ನಯನತಾರಾ ಪಾತ್ರದ ಸ್ನೇಹಿತ ಫರ್ಹಾನ್, ಮಾಂಸವನ್ನು ಕತ್ತರಿಸಲು ಆಕೆಯ ಬ್ರೈನ್ ವಾಶ್ ಮಾಡುತ್ತಾನೆ. ಭಗವಾನ್ ಶ್ರೀರಾಮ ಮತ್ತು ಸೀತೆ ಕೂಡ ಮಾಂಸ ಸೇವಿಸಿದ್ದಾರೆ ಎಂದು ಹೇಳುತ್ತಾರೆ. ಅಲ್ಲದೆ, ನಯನತಾರಾ ಪಾತ್ರ ದೇವಸ್ಥಾನಕ್ಕೆ ಹೋಗದೆ, ಫರ್ಹಾನ್‌ನ ಜಾಗಕ್ಕೆ 'ಇಫ್ತಾರಿ'ಗೆ ಹೋಗುವ ದೃಶ್ಯವನ್ನು ಉಲ್ಲೇಖಿಸಿ ದೂರಿನಲ್ಲಿ ಆಕ್ಷೇಪಿಸಿದ್ದಾರೆ.