ಮಂಗಳೂರು: ಏರ್ಪೋರ್ಟ್ ನಲ್ಲಿ ಅಕ್ರಮ ಸಾಗಾಟದ 50 ಲಕ್ಷ ಮೌಲ್ಯದ ಚಿನ್ನ ವಶಕ್ಕೆ


ಮಂಗಳೂರು: ಮಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಬ್ಬರು ಗುದನಾಳ ಹಾಗೂ ಚಾಕಲೇಟ್ ನಲ್ಲಿ ಮರೆಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 50 ಲಕ್ಷ ರೂ ಮೌಲ್ಯದ ಚಿನ್ನವನ್ನು  ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಜನವರಿ 12ರಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳಾದ IX816 ಮತ್ತು IX814 ಮೂಲಕ ಈ ಪ್ರಯಾಣಿಕರಿಬ್ಬರು ಅಬುಧಾಬಿ ಮತ್ತು ದುಬೈನಿಂದ ಆಗಮಿಸಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿದ್ದರು. ಈ ಪ್ರಯಾಣಿಕರಲ್ಲಿ ಓರ್ವನು ಗುದನಾಳದಲ್ಲಿ ಚಿನ್ನವನ್ನು ಅಂಡಕಾರದ ವಸ್ತುವಿನೊಂದಿಗೆ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಮತ್ತೋರ್ವನು ಬ್ಯಾಗ್ ನಲ್ಲಿ ಚಾಕಲೇಟ್ ನೊಂದಿಗೆ ಮರೆಮಾಡಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ ಇವರು ಅಕ್ರಮ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಪ್ರಯಾಣಿಕರಿಬ್ಬರ ಬಳಿಯಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ ಒಟ್ಟು 815 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ  50,93,750 ಎಂದು ಅಂದಾಜಿಸಲಾಗಿದೆ. ಇಬ್ಬರೂ ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.