ಈತ ಓದಿದ್ದು ಎಸ್ಎಸ್ಎಲ್ ಸಿ, ಲೋಕಾಯುಕ್ತ ಅಧಿಕಾರಿ ಎಂದು ಬೆಂಗಳೂರಿನ 36 ಅಧಿಕಾರಿಗಳಿಂದ ಹಣ ಪೀಕಿಸಿದ ಖತರ್ನಾಕ್ ಖದೀಮ

ಬೆಂಗಳೂರು: ಲೋಕಾಯುಕ್ತ ಅಧಿಕಾರಿಯೆಂದು ಪೋಸು ಕೊಟ್ಟು ಮೂವತ್ತಕ್ಕೂ ಸರ್ಕಾರಿ ಅಧಿಕಾರಿಗಳಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಶ್ರೀನಾಥ್ ರೆಡ್ಡಿ (34) ಬಂಧಿತ ಆರೋಪಿ. ಈತ 2007ರಿಂದಲೇ ಇದೇ ಮಾದರಿಯ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಹಿಂದೆ ಬೀಗ ಹಾಕಿರುತ್ತಿದ್ದ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ. ಬಳಿಕ ಈತ ಲೋಕಾಯುಕ್ತ ಪೊಲೀಸ್ ಅಧಿಕಾರಿಯೆಂದು ಹೇಳಿ ಸರ್ಕಾರಿ ಅಧಿಕಾರಿಗಳನ್ನು ಯಾಮಾರಿಸಲು ತೊಡಗಿದ್ದ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ.

ತೆಲುಗು ಚಲನಚಿತ್ರಗಳಿಂದ ಸ್ಫೂರ್ತಿ ಪಡೆದ ಈತ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ಕುಕೃತ್ಯ ಮುಂದುವರಿಸಿದ್ದ. ಕೇವಲ 10ನೇ ತರಗತಿ ಓದಿರುವ ಆರೋಪಿ 36 ಸರ್ಕಾರಿ ಅಧಿಕಾರಿಗಳಿಗೆ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇದರಲ್ಲಿ ಒಬ್ಬರು ಮಾತ್ರ ಪೊಲೀಸ್ ದೂರು ನೀಡಿದ್ದರು. ಅದನ್ನು ಆಧರಿಸಿ ತನಿಖೆ ನಡೆಸಿದಾಗ ಖದೀಮ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಶ್ರೀನಾಥ್ ರೆಡ್ಡಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಇದೇ ರೀತಿ ಸರ್ಕಾರಿ ಅಧಿಕಾರಿಗಳಿಗೆ ವಂಚಿಸಿದ್ದಾನೆ. ಈತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆಗೆ ಸಿಸಿಬಿಗೆ ವರ್ಗಾಯಿಸಲಾಗಿತ್ತು. 

ಲೋಕಾಯುಕ್ತ ಇನ್ ಸ್ಪೆಕ್ಟರ್ ಚಂದ್ರಶೇಖ‌ರ್ ಎಂದು ತನ್ನನ್ನು ಪರಿಚಯಿಸಿಕೊಂಡ ಶ್ರೀನಾಥ್ ರೆಡ್ಡಿ ಸರ್ಕಾರಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುತ್ತಿದ್ದ ಮತ್ತು ಹಣ ವಸೂಲಿ ಮಾಡುತ್ತಿದ್ದ. ಪ್ರಕರಣ ದಾಖಲಾಗಿದೆ ಎಂದು ಹೇಳಿ ಕೇಸ್ ಮುಚ್ಚಿ ಹಾಕಲು ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ. ಹಣ ಸಿಕ್ಕರೆ ಲೋಕಾಯುಕ್ತದ ತಾಂತ್ರಿಕ ವಿಭಾಗ ಯಾವುದೇ ವಿಚಾರಣೆ ನಡೆಸದೆ ಬಿ ರಿಪೋರ್ಟ್ ಸಲ್ಲಿಸಲಿದೆ ಎಂದು ಭರವಸೆ ನೀಡುತ್ತಿದ್ದ. ಇದೇ ರೀತಿ ಕಿರುಕುಳಕ್ಕೆ ಒಳಗಾದ ಸರ್ಕಾರಿ ಅಧಿಕಾರಿ ರಾಮದಾಸ್ ಎಂಬವರು ದೂರು ದಾಖಲಿಸಿದ್ದರು.

ಕೆಲವು ಕಡೆ ಲೋಕಾಯುಕ್ತದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿ ಎಂದು ತನ್ನನ್ನು ಹೇಳಿಕೊಂಡಿದ್ದ. ಅಲ್ಲದೆ, ತನ್ನ ಹೆಸರನ್ನು ಕೇಶವ ರಾವ್ ಎಂದಿ ಮಾಡಿಕೊಂಡಿದ್ದ. ಈತನ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಹೆಬ್ಬಗೋಡಿ, ಅತ್ತಿಬೆಲೆ, ಜಿಗಣಿ ಸೇರಿದಂತೆ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳಿವೆ.
BREAKING NEWS
Loading latest news...
Join our WhatsApp Channel Powered By : Online Pudu