ಪ್ರೀತಿಸಿದಾಕೆ ಕೈಕೊಟ್ಟಿದ್ದಾಳೆಂದು ಮನನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಪ್ರಿಯಕರ
Friday, December 8, 2023
ಬೆಂಗಳೂರು: ಪ್ರೀತಿಸಿದವಳು ಕೈಕೊಟ್ಟಳೆಂದು ಮನನೊಂದ ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ನಿವಾಸಿ ರಾಕೇಶ್ ಮೃತಪಟ್ಟ ದುರ್ದೈವಿ. ರಾಕೇಶ್ ಕಳೆದ ಐದಾರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆಕೆಯೂ ರಾಕೇಶ್ ನನ್ನು ಪ್ರೀತಿಸುತ್ತಿದ್ದಳು. ಆದರೆ ಇತ್ತೀಚೆಗೆ ಅವಳು ರಾಕೇಶ್‌ನಿಂದ ದೂರವಿರಲು ಶುರು ಮಾಡಿದ್ದಳು. ಈತನೊಂದಿಗೆ ಬಾಂಧವ್ಯ ಕಡಿದುಕೊಂಡಿದ್ದಳು.
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳು ಏಕಾಏಕಿ ದೂರಾಗಿದ್ದಳು. ಮಸೇಜ್, ಫೋನ್ ಕಾಲ್‌ಗೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈ ನಡುವೆ ಆಕೆಗೆ ಬೇರೊಬ್ಬ ಯುವಕನೊಂದಿಗೆ ಮದುವೆಗೆ ಸಿದ್ಧತೆ ನಡೆಯುತ್ತಿತ್ತು. ಈ ವಿಚಾರ ತಿಳಿದು ಬುಧವಾರ ರಾಕೇಶ್ ನೇರವಾಗಿ ಯುವತಿ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ರಾಕೇಶ್ ಹಾಗೂ ಯುವತಿ ನಡುವೆ ಗಲಾಟೆ ಆಗಿತ್ತು.
ಪ್ರೀತಿಸಿದವಳು ಮೋಸ ಮಾಡಿದ್ದಾಳೆಂದು ಮನನೊಂದ ರಾಕೇಶ್, ತನ್ನ ಮನೆಗೆ ಬಂದು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಕ್ಷಣ ರಾಕೇಶ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬೆಂಕಿ ತೀವ್ರತೆಗೆ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿಯೇ ಮೃತಪಟ್ಟಿದ್ದಾನೆ. ರಾಕೇಶ್ ಕುಟುಂಬಸ್ಥರು ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ