ಪುತ್ತೂರು: ಇಲ್ಲಿನ ಹಿಂದೂ ಸಂಘಟನೆಯ ಮತ್ತೋರ್ವನು ಕಾರ್ಯಕರ್ತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲು ಪೊಲೀಸರು ಮುಂದಾಗಿದ್ದಾರೆ. ಡಿವೈಎಸ್ಪಿಯವರ ವರದಿಯ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಈ ನೋಟಿಸ್ ಜಾರಿ ಮಾಡಿದ್ದಾರೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುನ್ನೂರು ನಿವಾಸಿ ಪ್ರವೀಶ್ ಕುಮಾರ್ ನಾಯರ್ ಎಂಬವರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದೆಂದು ಕಾರಣ ಕೇಳಿ ಪುತ್ತೂರು ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ.
ಸದ್ಯ ಅಯ್ಯಪ್ಪ ಮಾಲಾಧಾರಿಯಾಗಿರುವ ಪ್ರವೀಶ್ ಕುಮಾರ್, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ. ಇವರು ಹಲ್ಲೆ, ನೈತಿಕ ಪೊಲೀಸ್ ಗಿರಿ ಮಾದರಿಯ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಇವರು ಪುತ್ತೂರಿನಲ್ಲಿಯೇ ಇದ್ದರೆ ಕೋಮುವೈಷಮ್ಯ ಗಲಭೆ ಆಗುವುದಕ್ಕೆ ಆಸ್ಪದ ನೀಡಿದಂತಾಗುತ್ತದೆ. ಆದ್ದರಿಂದ ಕೋರ್ಟ್ ಹಾಜರಾತಿ ಹೊರತುಪಡಿಸಿ ದ.ಕ. ಜಿಲ್ಲೆಯಲ್ಲಿ ಇರದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಗಡೀಪಾರು ಮಾಡಬೇಕು ಎಂದು ಪುತ್ತೂರು ಡಿವೈಎಸ್ಪಿ ವರದಿ ನೀಡಿದ್ದಾರೆ.
ಪೊಲೀಸರ ವರದಿ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಂದು ಸಹಾಯಕ ಆಯುಕ್ತರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಪ್ರವೀಶ್ ಕುಮಾರ್ ಗೆ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ. ಪೊಲೀಸರ ಈ ನಡೆಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ. ಇತ್ತೀಚೆಗೆ ಇದೇ ಮಾದರಿಯಲ್ಲಿ ನಾಲ್ವರು ಸಂಘಟನೆ ಕಾರ್ಯಕರ್ತರನ್ನು ಗಡೀಪಾರು ಮಾಡಲು ನೋಟಿಸ್ ಮಾಡಲಾಗಿತ್ತು. ಗಡೀಪಾರು ಆದೇಶ ಆಗುವ ಮೊದಲೇ ನ್ಯಾಯಾಲಯದಿಂದ ತಡೆ ವಿಧಿಸಲಾಗಿತ್ತು.