ಆನ್ಲೈನ್ ನಲ್ಲಿ‌ ಆರ್ಡರ್ ಮಾಡಿದ್ದು ಹೆಡ್ ಫೋನ್, ಬಂದದ್ದು ಟೂತ್ ಪೇಸ್ಟ್ : ಪಾರ್ಸೆಲ್ ತೆರೆದ ಗ್ರಾಹಕ ಮಾಡಿದ್ದೇನು ಗೊತ್ತೇ?



ನವದೆಹಲಿ: ಇದು ಆನ್‌ಲೈನ್ ಶಾಪಿಂಗ್ ಯುಗ. ಎಲ್ಲವನ್ನೂ ಮನೆಯಲ್ಲಿ ಕುಳಿತುಕೊಂಡೇ ಆರ್ಡರ್ ಮಾಡಿ ಖರೀದಿಸಬಹುದು. ಆದರೂ ಆನ್‌ಲೈನ್ ವ್ಯವಹಾರದಲ್ಲಿ ಹಲವಾರು ಮಂದಿ ಮೋಸ ಹೋಗುತ್ತಾರೆ.

ಯಶ್ ಓಜಾ ಎಂಬವರು ಅಮೆಜಾನ್‌ನಿಂದ ಹೆಡ್‌ಫೋನ್ ಅನ್ನು ಆರ್ಡರ್ ಮಾಡಿದ್ದರು. ಅದರ ಬೆಲೆ 19,900 ರೂ. ಸೋನಿ ಕಂಪನಿಯ ವೈರ್‌ಲೆಸ್ ಹೆಡ್‌ಫೋನ್‌ ಅನ್ನು ಅವರು ಆರ್ಡರ್ ಮಾಡಿದ್ದಾರೆ. ಆರ್ಡರ್​​ ಮನೆ ಬಾಗಿಲಿಗೆ ಬಂದಿದೆ. ಸಂಪೂರ್ಣ ಪ್ಯಾಕ್ ಮಾಡಿರುವ ಪಾರ್ಸೆಲ್ ಅನ್ನು ಯಶ್ ಓಜಾ ತೆರೆದು ನೋಡಿದಾಗ ಹೆಡ್‌ಫೋನ್‌ ಬದಲಿಗೆ, ಅದರೊಳಗೆ ಟೂತ್‌ಪೇಸ್ಟ್ ಇರುವುದು ಕಂಡು ಬಂದಿದೆ.

ಆದ್ದರಿಂದ ಯಶ್ ಓಜಾ ತನಗಾಗಿರುವ ಈ ಆನ್‌ಲೈನ್ ವಂಚನೆಯ ಸಂಪೂರ್ಣ ವೀಡಿಯೊವನ್ನು ಮಾಡಿದ್ದಾರೆ. ಅದನ್ನು ತನ್ನ ಐಡಿ @Yashuish ನೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (Twitter)ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ವೈರಲ್ ಆದ ಬಳಿಕ, ಅಮೆಜಾನ್ ಅವರೊಂದಿಗೆ ಕ್ಷಮೆಯಾಚಿಸಿದೆ ಮತ್ತು ತಪ್ಪು ಐಟಂ ಕಳುಹಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದೆ ಮತ್ತು ಸಹಾಯ ಮಾಡುವ ಭರವಸೆ ನೀಡಿದೆ.

2.20 ನಿಮಿಷದ ಈ ವಿಡಿಯೋ ನೋಡಿ ಜನರು ಅಚ್ಚರಿಗೊಂಡಿದ್ದು, ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಆಗಾಗ್ಗೆ ಇಂತಹ ವಂಚನೆಗಳು ನಡೆಯುತ್ತವೆ.