ಯೂಟ್ಯೂಬರ್ ಆಗಿ ಮಿಲಿಯನ್ ಸಬ್ ಸ್ಕ್ರೈಬರ್ ಗುರಿ ಹೊಂದಿದ್ದ ಬಾಲಕ ಇಸ್ರೇಲ್ ದಾಳಿಗೆ ಬಲಿ - ಮೃತಪಟ್ಟ ಬಳಿಕ ಕನಸು ನನಸು
Tuesday, December 26, 2023
ಜೆರುಸಲೇಂ: ತಾನೋರ್ವ ದೊಡ್ಡ ಯೂಟ್ಯೂಬರ್ ಆಗಬೇಕೆಂದು ಕನಸು ಕಾಣುತ್ತಿದ್ದ ಪ್ಯಾಲೆಸ್ತೈನ್ ಮೂಲದ 13 ವರ್ಷದ ಅವ್ನಿ ಎಲ್ಡಸ್ ಎಂಬ ಬಾಲಕ ಗಾಜಾ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ದುರದೃಷ್ಟವಶಾತ್, ಅವ್ನಿ ಎಲ್ಡಸ್ ಸಾವಿನ ಬಳಿಕ ಆತನ 1 ಮಿಲಿಯನ್ ಸಬ್ಸ್ಕ್ರೈಬರ್ ಕನಸು ನನಸಾಗಿದೆ. ದುರಂತವೆಂದರೆ ಅದನ್ನು ಅನುಭವಿಸಲು ಆತನೇ ಭೂಮಿಯಲ್ಲಿಲ್ಲ.
ಎಲ್ಡಸ್ ಸಾವಿನ ಸುದ್ದಿ ಕೇಳಿ ಜನತೆ ಆತನ ಯೂಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಆಗುವ ಮೂಲಕ ಆತನ ಕನಸನ್ನು ನನಸು ಮಾಡಿದ್ದಾರೆ. ಸದ್ಯ ಎಲ್ಡಸ್ ಯೂಟ್ಯೂಬ್ ಚಾನೆಲ್ 1.49 ಮಿಲಿಯನ್ ಮಂದಿ ಸಬ್ಸ್ಕ್ರೈಬರ್ ಆಗಿದ್ದಾರೆ.
ಕಂಪ್ಯೂಟರ್ಸ್ ಮತ್ತು ಗೇಮಿಂಗ್ ಮೇಲಿನ ತಮ್ಮ ಪ್ರೀತಿಗೆ ಹೆಸರುವಾಸಿಯಾಗಿದ್ದ ಎಲ್ಡಸ್, ಕಳೆದ ವರ್ಷ ಆಗಸ್ಟ್‌ನಲ್ಲಿ ತಮ್ಮ ಚಾನಲ್ 1,000 ಚಂದಾದಾರರನ್ನು ಪೂರೈಸಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ತನ್ನ ಅಂತಿಮ ಗುರಿ ಏನು ಎಂಬುದನ್ನು ವಿವರಿಸಿದ್ದರು. ನಾನು ಅವ್ನಿ ಎಲ್ಡಸ್, ಪ್ಯಾಲೆಸ್ತೀನ್ನ ಗಾಜಾದವನು. ನನಗೆ 12 ವರ್ಷ ಎಂದು ವೀಡಿಯೊದಲ್ಲಿ ಹೇಳಿದ್ದನು. ನನ್ನ ಈ ಚಾನಲ್‌ನ ಗುರಿ ಮೊದಲು 1,00,000 ಚಂದಾದಾರರನ್ನು ತಲುಪುವುದು. ಆ ಬಳಿಕ 5,00,000, ನಂತರ 1 ಮಿಲಿಯನ್ ತಲುಪುವುದೇ ನನ್ನ ಕನಸು. ದೇವರ ಇಚ್ಛೆ ಮತ್ತು ನಿಮ್ಮ ಬೆಂಬಲ, ಪ್ರೀತಿಯಿದ್ದರೆ 10 ಮಿಲಿಯನ್ ಚಂದಾದಾರರನ್ನು ತಲುಪುತ್ತೇನೆ ಎಂದಿದ್ದನು.
ಇದೀಗ ಕಾಮೆಂಟ್‌ಗಳ ನಲ್ಲಿ ಹಲವಾರು ಬಳಕೆದಾರರು ಆತ ಮೃತಪಟ್ಟದ್ದಕ್ಕೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಎಲ್ಡಸ್ ಜೀವಂತವಾಗಿರುವಾಗ ಆತನ ಗುರಿಯನ್ನು ಸಾಧಿಸಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯನ್ನೂ ಕೋರಿದ್ದಾರೆ. ಈ ಒಂದು ಕ್ಷಣ ನಿಜಕ್ಕೂ ಭಾವನಾತ್ಮಕವಾಗಿದೆ. ಅಕ್ಟೋಬರ್ 7ರಂದು ಇಸ್ರೇಲಿ ಪಡೆ ನಡೆಸಿದ ದಾಳಿಯಲ್ಲಿ ಎಲ್ಡಸ್ ಅವರ ಮನೆಗೆ ಹಾನಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ನಮಗಾಗಲಿ ಮತ್ತು ನೆರೆಹೊರೆಯವರಾಗಲಿ ದಾಳಿಯ ಬಗ್ಗೆ ಯಾವುದೇ ಎಚ್ಚರಿಕೆ ನೀಡಲಿಲ್ಲ. ಇದ್ದಕ್ಕಿದ್ದಂತೆ ಸ್ಫೋಟವಾಗಿದೆ. ಅಂದು ರಾತ್ರಿ ನನ್ನ ಕುಟುಂಬದ 15 ಸದಸ್ಯರ ಹತ್ಯೆಯಾಗಿದೆ. ಅವರಲ್ಲಿ ಅವ್ನಿ ಕೂಡ ಒಬ್ಬ ಎಂದು ಮೊಹಮ್ಮದ್ ತಿಳಿಸಿದರು.
ಅಕ್ಟೋಬರ್ 7ರಂದು ಆರಂಭವಾದ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಈವರೆಗೂ ಗಾಜಾದಲ್ಲಿ 10,000 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಕನಿಷ್ಠ 4,000 ಮಕ್ಕಳು ಎಂಬುದು ಆಘಾತಕಾರಿ ಸಂಗತಿಯಾಗಿದೆ.