ಸೋಮೇಶ್ವರ ಬೀಚ್ ನಲ್ಲಿ ಸಮುದ್ರಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ
Sunday, December 10, 2023
ಉಳ್ಳಾಲ: ಇಲ್ಲಿನ ಸೋಮೇಶ್ವರ ಬೀಚ್ ನಲ್ಲಿ ನಿನ್ನೆ ಮಧ್ಯಾಹ್ನ ಸಮುದ್ರಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಇಂದು ಬೆಳಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗಿದೆ.
ಸೋಮೇಶ್ವರದ ಪರಿಜ್ಞಾನ ಪಿ ಯು ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಮೃತಪಟ್ಟ ದುರ್ದೈವಿ ವಿದ್ಯಾರ್ಥಿಗಳು.
ಶನಿವಾರ ಮಧ್ಯಾಹ್ನದ ಬಳಿಕ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಯಶ್ವಿತ್ ಮತ್ತು ಯುವರಾಜ್ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಸೋಮೇಶ್ವರದ ಸೋಮನಾಥ ದೇವಸ್ಥಾನಕ್ಕೆ ಆಗಮಿಸಿದ್ದರು. ಅಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಪಕ್ಕದ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಯಶ್ವಿತ್ ಮತ್ತು ಯುವರಾಜ್ ನೀರಾಟಕ್ಕೆಂದು ಸಮುದ್ರಕ್ಕಿಳಿದಿದ್ದಾರೆ. ಈ ವೇಳೆ ದೈತ್ಯ ಅಲೆಗಳು ಅವರಿಬ್ಬರನ್ನು ಕೊಚ್ಚಿಕೊಂಡು ಹೋಗಿದೆ. ಸ್ಥಳಕ್ಕೆ ದೌಢಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪರಿಣಿತ ಈಜುಗಾರರು ರಾತ್ರಿವರೆಗೂ ಶೋಧ ನಡೆಸಿದರೂ ನೀರುಪಾಲಾದ ಯುವರಾಜ್, ಯಶ್ವಿತ್ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಘಟನೆ ನಡೆದ ಸ್ಥಳದಲ್ಲೇ ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿದೆ. ಉಳ್ಳಾಲ ಪೊಲೀಸರು ದೇರಳಕಟ್ಟೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು ತಂದೆ, ತಾಯಿ ಏಕೈಕ ಸಹೋದರಿಯರನ್ನ ಅಗಲಿದ್ದಾರೆ. ಸೋಮೇಶ್ವರ ಕಡಲ ಕಿನಾರೆಯಲ್ಲಿ ಪದೇ ಪದೇ ಅವಘಡಗಳು ನಡೆಯುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಇಲ್ಲಿ ಖಾಯಂ ಜೀವ ರಕ್ಷಕ ಸಿಬ್ಬಂದಿಗಳನ್ನು ನೇಮಿಸಿಲ್ಲ. ಕಡಲ ತೀರಕ್ಕೆ ಭೇಟಿ ಕೊಡುವ ಜನರು ಜಾಗರೂಕರಾಗಿರಬೇಕೆಂದು ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಬಾಲಕೃಷ್ಣ ಎಚ್ಚರಿಸಿದ್ದಾರೆ.