‘ಆಳ್ವಾಸ್ ರಾಜ್ಯದ ಶೈಕ್ಷಣಿಕ ಮಿನುಗು ನಕ್ಷತ್ರ’ : ಸಂಸದ ನಳಿನ್ ಕುಮಾರ್ ಕಟೀಲು ಬಣ್ಣನೆ


ಮೂಡುಬಿದಿರೆ: ‘ಆಳ್ವಾಸ್’ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಮಿನುಗು ನಕ್ಷತ್ರ ಅದಕ್ಕೆ ‘ಆನಂದ ಸ್ವರೂಪ'ವನ್ನು ಆಳ್ವರು ನೀಡಿದ್ದಾರೆ' ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಬಣ್ಣಿಸಿದ್ದಾರೆ.

ಪುತ್ತಿಗೆ ವಿವೇಕಾನಂದ ನಗರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಾಥಮಿಕ ಶಾಲೆ 'ಆನಂದ ಸ್ವರೂಪ'ವನ್ನು ಉದ್ಘಾಟಿಸಿ ಅವರು ಮಾತನಾಡಿ, ಮೂಡುಬಿದಿರೆಗೆ ಸಾಂಸ್ಕೃತಿಕ ಹಾಗೂ ಶಿಕ್ಷಣ ಕಾಶಿ ಎಂಬ ಹೆಸರು ತಂದವರು ಡಾ.ಎಂ. ಮೋಹನ ಆಳ್ವರು. ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣವನ್ನು ಮಾದರಿಯಾಗಿ ನೀಡುತ್ತಿದ್ದಾರೆ ಎಂದು ಹೇಳಿದರು. 


ಮಹಾತ್ಮಾ ಗಾಂಧೀಜಿ ‘ರಾಮರಾಜ್ಯ’ದ ಕನಸನ್ನು 
ನನಸು ಮಾಡಲು ಕೇವಲ ಭದ್ರತೆ, ಅಭಿವೃದ್ಧಿ ಮತ್ತಿತರ ಕಾರ್ಯಗಳಿಂದಲೇ ಸಾಧ್ಯವಿಲ್ಲ. ಉತ್ತಮ ಮನಸ್ಸುಗಳನ್ನು ಕಟ್ಟಬೇಕು. ಪ್ರತಿ ವ್ಯಕ್ತಿಯನ್ನು ಮೌಲ್ಯಯುತವಾಗಿ ರೂಪಿಸಬೇಕು. ಅದಕ್ಕೆ ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣ ಬಹುಮುಖ್ಯ. ಅಂತಹ ವ್ಯಕ್ತಿ ನಿರ್ಮಾಣದಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯ. ಆ ಮಾದರಿ ಕಾರ್ಯವನ್ನು ಆಳ್ವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.


ಕೇವಲ ಉಳ್ಳವರಿಗೆ ಮಾತ್ರವಲ್ಲ, ಅವಕಾಶ ವಂಚಿತರಿಗೂ ಶಿಕ್ಷಣ ನೀಡುವ ಆಳ್ವರ ಮನಸ್ಸು ಆಳ್ವಾಸ್ ಸಂಸ್ಥೆಯನ್ನು ಬೆಳೆಸಿದೆ. ರಾಜ್ಯ ಪ್ರವಾಸದ ಸಂದರ್ಭದಲ್ಲಿ ನನ್ನ ಬಳಿ ಹೆಚ್ಚಿನವರು ಕೇಳುವ ಹೆಸರು ‘ಆಳ್ವಾಸ್’. ಈ ಶಿಕ್ಷಣ ಸಂಸ್ಥೆಯು ಕೇವಲ ಮೂಡುಬಿದಿರೆಯ ನೆಲದಲ್ಲಿ ಮಾತ್ರವಲ್ಲ, ಎಲ್ಲಾ ಕಡೆಗಳ ಜನರ ಮನಸ್ಸಿನಲ್ಲಿ ನೆಲೆಯೂರಿದೆ. ಎಲ್ಲಿ ಹೋದರು ನಮ್ಮ ಬಳಿ ಪೋಷಕರು ಇಡುವ ಬೇಡಿಕೆಯೊಂದೇ, ‘ಆಳ್ವಾಸ್‍ನಲ್ಲಿ ನಮ್ಮ ಮಕ್ಕಳಿಗೆ ಸೀಟು ಸಿಗಬಹುದಾ?’ ಎಂದು ಖುಷಿ ಹಂಚಿಕೊಂಡರು. 

ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ‘ಎಲ್ಲರನ್ನೂ ತನ್ನವರೆಂದು ಪ್ರೀತಿಯಿಂದ ನೋಡಿಕೊಳ್ಳುವ ಆಳ್ವರ ವ್ಯಕ್ತಿತ್ವವೇ ಒಂದು ಮಾದರಿ. ಅವರು ಮಾದರಿ ಶಿಕ್ಷಣ ತಜ್ಞರಾಗಿದ್ದಾರೆ’ ಎಂದರು. ಶಿಕ್ಷಣದಲ್ಲಿ ಹಲವು ಕೋಶಗಳಿವೆ. ಆದರೆ, ಆಳ್ವರು ‘ಮನೋಮಯ’ ಹಾಗೂ ‘ಆನಂದಮಯ’ ಎಂಬ ಎರಡು ನೆಮ್ಮದಿಯ ಕೋಶಗಳನ್ನು ಸೃಜಿಸಿದ್ದಾರೆ ಎಂದರು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ‘ಮಕ್ಕಳ ವಿದ್ಯಾಭ್ಯಾಸಕ್ಕೆ ಭವ್ಯ ಭವನ ಇದ್ದರೂ, ಶುಲ್ಕ ಹೆಚ್ಚಳವಿಲ್ಲ. ಎಲ್ಲರೂ ಅತ್ಯುನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ‘ಆನಂದ ಸ್ವರೂಪ’ ಎಂದು ಸಮರ್ಪಿಸಿದರು. 

ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕದ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ‘ಆಳವಾದ ಜ್ಞಾನ ಹಾಗೂ ಅಹಂಕಾರ ಇಲ್ಲದ ವ್ಯಕ್ತಿತ್ವ ಆಳ್ವರದ್ದು. ಅವರು ಶಿಕ್ಷಣದ ಮೂಲಕ ನಾಡಿನಲ್ಲಿ ಪರಿವರ್ತನೆಯ ನಾಂದಿ ಹಾಡುತ್ತಿದ್ದಾರೆ. ಅವರ ಸಂಘಟನಾ ಚಾತುರ್ಯ ಹಾಗೂ ಕಾರ್ಯಗಳು ಪವಾಡಗಳಂತೆ ಎಂದು ವಿಶ್ಲೇಷಿಸಿದರು. 

ಕಾವ್ಯಗಳ ಸಾಲುಗಳ ಮೂಲಕ ಬಣ್ಣಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ‘ವಸುಧೈವ ಕುಟುಂಬಕಂ’ ಎಂಬ ಭಾವೈಕ್ಯ ಸಂದೇಶವನ್ನು ಕೃತಿ ಮೂಲಕ ಸಾರಿದ ಆಳ್ವರು, ಸರ್ವಜನಾಂಗದ ಶಾಂತಿಯತೋಟವನ್ನು ನಿರ್ಮಿಸಿದ್ದಾರೆ. ಕವಿಗಳು ಹೇಳಿದಂತೆ ‘ಮೊದಲು ಮಾನವನಾಗು’ ಎಂಬ ನೀತಿಯನ್ನು 
ಕಾರ್ಯಗತಗೊಳಿಸುತ್ತಿದ್ದಾರೆ’ ಎಂದರು. ಆಳ್ವರು ನಂದನವನ್ನು ಸೃಷ್ಟಿಸುತ್ತಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಮೊದಲು ಆ ಕ್ಷೇತ್ರದ ದಾಸನಾಗುವುದು ಮುಖ್ಯ ಎಂಬ ದಾಸವಾಣಿಯಂತೆ ಆಳ್ವರ ಕಾರ್ಯ ವೈಖರಿ. ಮನಸ್ಸಿನ ತಿಳಿಯನ್ನು ಕಲಕದೇ ಇರುವ ಸಾಮರಸ್ಯದ ನಾಡುಕಟ್ಟುತ್ತಿದ್ದಾರೆ’ ಎಂದು ಅಭಿನಂದಿಸಿದರು.

ಮಾಜಿ ಸಚಿವ ಕೆ.ಅಭಯಚಂದ್ರಜೈನ್, 
‘ಮೂಡುಬಿದಿರೆಗೆ ಕೆಜಿಯಿಂದ ಹಿಡಿದು ಪಿಎಚ್‍ಡಿ ವರೆಗೆ 
ಶಿಕ್ಷಣ ಸೌಲಭ್ಯ ಕಲ್ಪಿಸಿದ ಆಳ್ವರ ಕಾರ್ಯ 
ಯಶಸ್ವಿಯಾಗಲಿ ಎಂದು ಹಾರೈಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಆಳ್ವರ 
ಪರಿಶ್ರಮದಿಂದ ಮೂಡುಬಿದಿರೆಗೆ ಹೆಸರು ಬಂದಿದೆ. 
ಅವರ ಈ ಕಾರ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು. 

ಧರ್ಮಗುರು ಫಾ. ಗೋಮ್ಸ್, ಸಂಪಿಗೆ ಚರ್ಚ್ 
ಧರ್ಮಗುರು ಫಾ. ವಿನ್ಸೆಂಟ್ ಡಿಸೋಜ, ಬದ್ರಿಯಾ 
ಜುಮ್ಮಾ ಮಸೀದಿ ಖತಿಬ್ ಅಬೂಬಕ್ಕರ್ ಸಿದ್ಧಿಕ್ ದಾರಿಮಿ, ಮಹಮ್ಮದ್‍ರಫಿ ಧಾರಿಮಿ, ಪುತ್ತಿಗೆಗ್ರಾಮ 
ಪಂಚಾಯಿತಿ ಅಧ್ಯಕ್ಷೆ ರಾಧಾ, ಕ್ಷೇತ್ರ ಶಿಕ್ಷಣಾಧಿಕಾರಿ 
ಎಚ್. ಎಸ್. ವಿರೂಪಾಕ್ಷಪ್ಪ, ಪ್ರಮುಖರಾದ ಜಯಶ್ರೀ 
ಅಮರನಾಥ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ 
ಎಂ., ಉದ್ಯಮಿ ಎಸ್.ಎಂ. ಮುಸ್ತಫಾ, ಶ್ರೀಪತಿ ಭಟ್, 
ನಾರಾಯಣಪಿ.ಎಂ, ತಿಮ್ಮಯ್ಯ ಶೆಟ್ಟಿ, ಧಾರ್ಮಿಕ 
ಮುಖಂಡ ಉಮೇಶ್ ಪೈ, ಎಂ.ಸಿ.ಎಸ್. ಸೊಸೈಟಿ 
ವಿಶೇಷಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಆಳ್ವರ ಕೌಟುಂಬಿಕ ಬಂಧುಗಳಾದ ಮೀನಾಕ್ಷಿ 
ಆಳ್ವ, ಶ್ರೀನಿವಾಸ ಆಳ್ವ ಇದ್ದರು. 

ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ 
ನಿರೂಪಿಸಿದರು.