ಮಂಗಳೂರು ಸಹಿತ ದೇಶದ ಏಳು ವಿಮಾನ‌ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್ - ಪ್ರಕರಣ ದಾಖಲು

ಮಂಗಳೂರು: ನಗರದ ಮಂಗಳೂರು‌ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಸಹಿತ ದೇಶದ ಏಳು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ರವಾನೆಯಾಗಿದೆ. 

ಡಿ.26ರಂದು ರಾತ್ರಿ 11.59ಕ್ಕೆ, ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ ಏಳು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಯ ಕುರಿತು ಇಮೇಲ್ ರವಾನೆಯಾಗಿದೆ. xonocikonoci10@beeble.com ಎಂಬ ಇಮೇಲ್ ಐಡಿಯಿಂದ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಲಾಗಿತ್ತು. ಈ ಮೇಲ್ ನಲ್ಲಿ "ನಿಮ್ಮ ಒಂದು ವಿಮಾನದೊಳಗೆ ಹಾಗೂ ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಮರೆಮಾಡಲಾಗಿದೆ. ಅದು ಕೆಲವೇ ಗಂಟೆಗಳಲ್ಲಿ ಸ್ಫೋಟಿಸಲಿದೆ. ನಿಮ್ಮನ್ನೆಲ್ಲ ಕೊಲ್ಲುತ್ತೇವೆ. ನಾವು 'ಫನ್ನಿಂಗ್' ಎಂಬ ಭಯೋತ್ಪಾದಕ ಗುಂಪಿನವರು" ಎಂದು ಬರೆಯಲಾಗಿತ್ತು. ಈ ಇಮೇಲ್ ಸಂದೇಶವನ್ನು ಡಿಸೆಂಬರ್  27 ರಂದು ಬೆಳಗ್ಗೆ 11. 20ಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಗಮನಿಸಿದ್ದಾರೆ. 

ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಮಾಹಿತಿ ದೊರೆತ ತಕ್ಷಣ ವಿಮಾನ ನಿಲ್ದಾಣದ ಆವರಣದ ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದೇವೆ. ಎಎಸ್‌ಸಿ ಮತ್ತು ಬಿಡಿಡಿಎಸ್ ಪರಿಶೀಲನೆಯನ್ನು ತಕ್ಷಣವೇ ನಡೆಸಲಾಗಿದೆ.   ಬಜ್ಪೆ ಪೊಲೀಸ್ ಇನ್ಸ್ ಪೆಕ್ಟರ್ ಅವರ ಉಪಸ್ಥಿತಿಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಯೂ ನಡೆಸಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳ (ಅದಾನಿ) ದೂರಿನ ಮೇರೆಗೆ ಬಜ್ಪೆ  ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಅಪರಾಧ ಸಂಖ್ಯೆ 210/23 u/s 507 IPC ಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.