ಬೆಂಗಳೂರು: ದ್ವಿಚಕ್ರ ವಾಹನ ಸವಾರನೊಬ್ಬನು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಸಂಚಾರಿ ಪೊಲೀಸರು ವಿಧಿಸಿರುವ ದಂಡದ ಮೊತ್ತ ಕೇಳಿದರೆ ಯಾರಾದರೂ ದಂಗಾಗಲೇಬೇಕು. ಆತ ಅಷ್ಟೊಂದು ಮಟ್ಟಿಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವುದು ಬೆಳಕಿಗೆ ಬಂದಿದೆ.
ಬಹಳಷ್ಟು ಬಾರಿ ಹೆಲ್ಮಟ್ ರಹಿತ ಚಾಲನೆ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಯಡಿ ಕಳೆದ ಎರಡು ವರ್ಷಗಳಿಂದ ಈತ ಬರೋಬ್ಬರಿ 643 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಈ 643ರಷ್ಟು ಪ್ರಕರಣದಲ್ಲಿ 3.22 ಲಕ್ಷ ರೂ. ದಂಡ ವಿಧಿಸಲಾಗಿದೆ. KA04KF9072 ನಂಬರ್‌ನ ಸ್ಕೂಟಿಯಿಂದ ಇಷ್ಟೊಂದು ಪ್ರಮಾಣದ ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಗಂಗಾನಗರದ ನಿವಾಸಿಯೊಬ್ಬರ ಹೆಸರಿನಲ್ಲಿದ್ದ ದ್ವಿಚಕ್ರ ವಾಹನ ಇದಾಗಿದೆ.
ಕಳೆದ ಎರಡು ವರ್ಷಗಳಿಂದ ಇದೇ ಸ್ಕೂಟಿ ಬಳಸಿಕೊಂಡು ಬೇರೆ - ಬೇರೆ ವ್ಯಕ್ತಿಗಳು ವಾಹನ ಚಲಾಯಿಸಿ ದಂಡ ಬೀಳಲು ಕಾರಣರಾಗಿದ್ದಾರೆ. ನಗರದ ಬಹುತೇಕ ಜಂಕ್ಷನ್ ಗಳಲ್ಲಿ ಅಳವಡಿಸಿದ ಅತ್ಯಾಧುನಿಕ ಕ್ಯಾಮರಾಗಳಲ್ಲಿ ನಿಯಮ ಉಲ್ಲಂಘಿಸಿದವರ ಭಾವಚಿತ್ರ ಸೆರೆ ಹಿಡಿದು ಇದರ ಆಧಾರದನ್ವಯ ಡಿಜಿಟಲ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಆರ್. ಟಿ ನಗರ, ತರಳುಬಾಳು ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ 643 ಬಾರಿ ಸಂಚಾರ ನಿಯಮ ಉಲ್ಲಂಘಿಸಲಾಗಿದೆ ಎಂಬುದು ತಿಳಿದುಬಂದಿದೆ.
ಒನ್ ವೇ ಸಂಚಾರ, ನೋ ಪಾರ್ಕಿಂಗ್, ಫುಟ್ ಪಾತ್‌ಗಳಲ್ಲಿ ಪಾರ್ಕಿಂಗ್ ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ದ ಸವಾರರ ವಿರುದ್ಧ ಕಳೆದ ಆರು ತಿಂಗಳಲ್ಲಿ 5.280 ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ.