ಫೋನ್ ಕಿತ್ಕೊಂಡ ಪ್ರಾಂಶುಪಾಲರು, ಪ್ರಾಣ ಬಿಟ್ಟ ವಿದ್ಯಾರ್ಥಿ
Friday, November 3, 2023
ಒಡಿಶಾ: ಶಾಲೆಯ ಪ್ರಾಂಶುಪಾಲರು ಮೊಬೈಲ್ ಫೋನ್ ಕಿತ್ತುಕೊಂಡರೆಂದು ಎಸ್ಎಸ್ಎಲ್ ಸಿ ವಿದ್ಯಾರ್ಥಿ ಮರಕ್ಕೆ ನೇಣು ಬಿಗಿದುಕೊಂಡು, ಸಾವಿಗೆ ಶರಣಾದ ಘಟನೆ ಒಡಿಶಾದ ಖೋರ್ಧಾ ಪಟ್ಟಣದ ಖಾಸಗಿ ಶಾಲೆಯಲ್ಲಿ ವರದಿಯಾಗಿದೆ.
ಶಾಲೆಯ ಪ್ರಾಂಶುಪಾಲರು ಆತನ ಬಳಿಯಿದ್ದ ಮೊಬೈಲ್ ಫೋನ್ ಕಿತ್ಕೊಂಡ ಕೆಲವು ಗಂಟೆಗಳಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಗಜಪತಿ ಜಿಲ್ಲೆಯ ಎಸ್ಎಸ್ಎಲ್ ಸಿ ಬಾಲಕ ಶಾಲೆಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದು, ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಶುಕ್ರವಾರ ಬೆಳಗ್ಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ತಲುಪಿದ ಪೊಲೀಸ್ ಅಧಿಕಾರಿಗಳು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧವಿತ್ತು. ಆದರೂ ಮೃತ ವಿದ್ಯಾರ್ಥಿಯು ನಿಯಮ ಉಲ್ಲಂಘಿಸಿ ತನ್ನ ಬಳಿ ಮೊಬೈಲ್ ಫೋನ್ ಇಟ್ಟುಕೊಂಡಿದ್ದ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ. “ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಸಾವಿನ ಹಿಂದಿರುವ ಕಾರಣದ ಬಗ್ಗೆ ನಾವು ಎಲ್ಲಾ ಕೋನಗಳಲ್ಲಿ ಪರಿಶೀಲಿಸುತ್ತಿದ್ದೇವೆ. ಘಟನೆಯ ಬಗ್ಗೆ ವಿದ್ಯಾರ್ಥಿಯ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.