ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಶಾರೀಕ್, ಯಾಸೀನ್ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ - ಹಿಂದುಗಳನ್ನು ಭಯಪಡಿಸುವುದೇ ಟಾರ್ಗೆಟ್ ಎಂದ ಭಯೋತ್ಪಾದಕರು


ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ವರ್ಷದ ಬಳಿಕ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಯಾಸೀನ್ ಎಂಬಿಬ್ಬರು ಭಯೋತ್ಪಾದಕರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಬಾಂಬ್ ಸ್ಫೋಟ ಘಟನೆ ಬಗ್ಗೆ 2022ರ ನವೆಂಬರ್ 23ರಂದು ದೆಹಲಿ ಎನ್‌ಐಎ ವಿಭಾಗದಲ್ಲಿ 120 ಬಿ, 307 ಐಪಿಸಿ ಮತ್ತು ಸ್ಫೋಟಕ ಕಾಯ್ದೆಯಡಿ 3, 4 ಮತ್ತು 5ರ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು. 2023ರ ಜುಲೈನಲ್ಲಿ ಶಾರೀಕ್ ಹಾಗೂ ಸೈಯದ್ ಯಾಸಿನ್ ರನ್ನು ಎನ್‌ಐಎ ಬಂಧಿಸಿತ್ತು. ತನಿಖೆಯ ಬಳಿಕ ನ.29ರಂದು ಇವರಿಬ್ಬರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಹಿಂದೂಗಳನ್ನು ಭಯಪಡಿಸುವ ಉದ್ದೇಶದಿಂದ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ಸಂಚು ಹೂಡಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ.

ಶಾರೀಕ್ ಮತ್ತು ಯಾಸೀನ್ ತಮ್ಮ ಆನ್ಲೈನ್ ಹ್ಯಾಂಡ್ಲರ್ ಗಳ ಸೂಚನೆಯಂತೆ, ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದರು. ಸ್ಫೋಟಕ ಸಾಮಗ್ರಿಯನ್ನು ಯಾಸೀನ್ ಒದಗಿಸಿದ್ದ. ಅದನ್ನು ಬಳಸಿಕೊಂಡು ಮೊಹಮ್ಮದ್ ಶಾರೀಕ್ ಕುಕ್ಕರ್ ಬಾಂಬ್ ತಯಾರಿಸಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಶಾರೀಕ್ ಮೊದಲ ಬಾರಿಗೆ 2020ರಲ್ಲಿ ಮಂಗಳೂರಿನಲ್ಲಿ ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆದು ತನಿಖಾ ಏಜನ್ಸಿಗಳ ಟಾರ್ಗೆಟ್ ಆಗಿದ್ದ. ಅದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಡೆದ ಭಯೋತ್ಪಾದಕ ಕೃತ್ಯ ಬಾಂಬ್ ಟ್ರಯಲ್ ಪ್ರಕರಣದಲ್ಲಿಯೂ ಶಾರೀಕ್ ಹೆಸರು ಕೇಳಿಬಂದಿತ್ತು. ಆ ಪ್ರಕರಣದಲ್ಲಿ ಯಾಸೀನ್ ಸೇರಿದಂತೆ ಹತ್ತು ಮಂದಿಯನ್ನು ಎನ್‌ಐಎ ಬಂಧಿಸಿತ್ತು.

ಬಾಂಬ್ ಟ್ರಯಲ್ ಪ್ರಕರಣದಲ್ಲಿ ಶಾರೀಕ್, ಯಾಸೀನ್ ಸಹಿತ 9 ಮಂದಿಯ ವಿರುದ್ಧ ಎನ್‌ಐಎ ಅಧಿಕಾರಿಗಳು ಕಳೆದ ಜೂನ್ 30ರಂದು ದೋಷಾರೋಪ ಸಲ್ಲಿಸಿದ್ದರು. ದೇಶದ ವಿರುದ್ಧ ಮುಸ್ಲಿಂ ಯುವಕರನ್ನು ಪ್ರಚೋದಿಸಿ, ಐಸಿಸ್ ನೆಟ್ವರ್ಕ್ ಸೇರುವಂತೆ ಮಾಡುವ ಕೃತ್ಯದಲ್ಲಿ ಯಾಸೀನ್ ಮತ್ತು ಶಾರೀಕ್ ನಿರತರಾಗಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿತ್ತು.