-->
1000938341
ಸೌದಿ ಅರೇಬಿಯಾದಲ್ಲಿ ಬಂಧನದಲ್ಲಿದ್ದ ಕಡಬದ ಯುವಕ ತಾಯ್ನಾಡಿಗೆ ಆಗಮನ

ಸೌದಿ ಅರೇಬಿಯಾದಲ್ಲಿ ಬಂಧನದಲ್ಲಿದ್ದ ಕಡಬದ ಯುವಕ ತಾಯ್ನಾಡಿಗೆ ಆಗಮನ


ಮಂಗಳೂರು: ಮಾಡದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ 11 ತಿಂಗಳ ಸೆರೆಮನೆ ವಾಸದ ಬಳಿಕ ಈಗ ಬಂಧಮುಕ್ತವಾಗಿರುವ ಕಡಬದ ಚಂದ್ರಶೇಖರ್ ಸುರಕ್ಷಿತವಾಗಿ ಮನೆ ಸೇರಿದ್ದಾರೆ.

ಸೋಮವಾರ ರಾತ್ರಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್, ಬಿಡುಗಡೆಗೆ ಯತ್ನಿಸಿದ್ದ ಕೊಕ್ಕಡ ಶ್ರೀಧರ ಗೌಡ ಮತ್ತಿತರರು ಅವರನ್ನು ಸ್ವಾಗತಿಸಿದರು. ತಾಯಿ ಕಣ್ಣೀರ್ಗರೆದು ಮಗನನ್ನು ಆಲಂಗಿಸಿದರು.

ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮ ಗಳಲ್ಲಿ ನನ್ನ ವಿಚಾರದ ಬಗ್ಗೆ ವರದಿ ಬಂದಿರುವ ಕಾರಣ ನನ್ನ ಬಿಡುಗಡೆ ಸುಲಭಗೊಂಡಿದೆ, ಮಂಗಳೂರಿನವರು ತುಂಬಾ ಜನ ನೆರವಾಗಿದ್ದಾರೆ, ಅವರೆಲ್ಲರಿಗೂ ಕೃತಜ್ಞನಾಗಿದ್ದೇನೆ . ತಾಯ್ನಾಡಿಗೆ ಬಂದಿರುವುದು ಮತ್ತು ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದೆ, ಮುಂದೆ ಬೇರೆ ಉದ್ಯೋಗ ಸಿಗುವ ಭರವಸೆ ಇದೆ ಎಂದು ಹೇಳಿದರು.

ಸೌದಿಯಲ್ಲಿ ಜೈಲಿನಲ್ಲಿದ್ದಾಗ ತುಂಬಾ ಕಷ್ಟ ಆಗಿತ್ತು, ಯಾರ ಹತ್ತಿರವೂ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಮೊಬೈಲ್ ಕೊಟ್ಟರೂ ಎರಡೇ ನಿಮಿಷ ಮಾತನಾಡಬಹುದಿತ್ತು. ತಪ್ಪು ಮಾಡದೇ ನಾನು ಅಲ್ಲಿ ಸುಮ್ಮನೆ ಒಳಗಿದ್ದೆ. ಸೆರೆಮನೆ ವಾಸ ಅನುಭವಿಸಿದೆ ಎಂದರು.



ಬೆಂಗಳೂರಿನಲ್ಲಿದ್ದ ಚಂದ್ರಶೇಖರ್ ಭಡ್ತಿಯೊಂದಿಗೆ ಸೌದಿಗೆ ತೆರಳಿದ್ದರು. ಅಲ್ಲಿ ಅವರು ಮೊಬೈಲ್ ಸಿಮ್ ಖರೀದಿಗೆಂದು  ಬೆರಳಚ್ಚು ಹಾಗೂ ಇತರ ವಿವರ ನೀಡಿದ್ದರು.

ಕೆಲವು ದಿನಗಳಲ್ಲಿ ರಿಯಾದ್ ಪೊಲೀಸರು ಚಂದ್ರಶೇಖ‌ರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮಹಿಳೆಯೊಬ್ಬರು ನೀಡಿದ ದೂರಿನಂತೆ ಚಂದ್ರಶೇಖರ್ ಅವರ ಖಾತೆಗೆ ಮಹಿಳೆ ಖಾತೆಯಿಂದ 22 ಸಾವಿರ ಸೌದಿ ರಿಯಾಲ್ ವರ್ಗಾವಣೆಯಾಗಿತ್ತು. ಆದರೆ ಇದು ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರ ಅವರ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು. ಚಂದ್ರ ಅವರ ವಾದವನ್ನು ಪರಿಗಣಿಸದೆ ಪೊಲೀಸರು ಅವರನ್ನು ಜೈಲಿಗೆ ಹಾಕಿದ್ದರು.

ಅವರ ಗೆಳೆಯರು, ಕೆಲಸ ಮಾಡುತ್ತಿದ್ದ ಕಂಪೆನಿಯ ಪ್ರತಿನಿಧಿಗಳು ಸೇರಿ ದಂಡ ಪಾವತಿಸಿ, ಬಿಡುಗಡೆಗೆ ಶ್ರಮಿಸಿದ್ದಾರೆ. ಕೊನೆಗೂ ಚಂದ್ರಶೇಖರ್ ತಾಯ್ನಾಡಿಗೆ ಆಗಮಿಸುವಂತಾಗಿದೆ.

Ads on article

Advertise in articles 1

advertising articles 2

Advertise under the article