ಲಕ್ನೋ: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಯುವಕನ ವಿವಾಹ ಆಸ್ಪತ್ರೆಯಲ್ಲೇ ನಡೆದಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಗಾಜಿಯಾಬಾದ್ನ ಮ್ಯಾಕ್ಸ್ ವೈಶಾಲಿ ಆಸ್ಪತ್ರೆಯಲ್ಲಿ ಈ ಮದುವೆ ನಡೆದಿದೆ. ವಿವಾಹದ ಬಳಿಕ ವರ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಮದುವೆಯ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು, ವರ ಅವಿನಾಶ್ ಕುಮಾರ್ ತನ್ನ ವಿವಾಹಕ್ಕೆ ನಾಲ್ಕು ದಿನಗಳು ಬಾಕಿಯಿದ್ದಾಗಲೇ ಆತನ ಆರೋಗ್ಯ ಹದಗೆಟ್ಟಿದೆ. ಅವರನ್ನು ತಪಾಸಣೆ ಮಾಡಿದಾಗ ಡೆಂಗ್ಯೂನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಅವರ ಪ್ಲೇಟ್ಲೆಟ್ 10 ಸಾವಿರಕ್ಕಿಂತ ಕಡಿಮೆ ಇತ್ತು.
ಇದು ಅವರ ಜೀವಕ್ಕೆ ಅಪಾಯವನ್ನುಂಟು ಮಾಡಬಹುದೆಂದು ವರ ಅವಿನಾಶ್ ತಂದೆ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದರು. ಇದಕ್ಕೆ ವಧುವಿನ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಗದಿಯಾಗಿರುವ ಮುಹೂರ್ತದಲ್ಲೇ ಮದುವೆ ಮಾಡಬೇಕು ಎಂದು ವಧುವಿನ ಕಡೆಯವರು ಪಟ್ಟು ಹಿಡಿದಿದ್ದರು. ಆದ್ದರಿಂದ ಆಸ್ಪತ್ರೆಯ ಹಾಲ್ನಲ್ಲಿ ಮದುವೆಯನ್ನು ಸರಳವಾಗಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿಸಲಾಗಿದೆ.
ವರ ಅವಿನಾಶ್ ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಮತ್ತು ನವದಂಪತಿಗಳಿಗೆ ಮತ್ತೊಮ್ಮೆ ಸಿಬ್ಬಂದಿ ವತಿಯಿಂದ ಶುಭ ಹಾರೈಸಲಾಗುವುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.