ಗಾಯಕಿಯನ್ನು ಅತ್ಯಾಚಾರ ಮಾಡಿದ ಮಾಜಿ ಶಾಸಕನಿಗೆ 15ವರ್ಷಗಳ ಕಾರಾಗೃಹ ಶಿಕ್ಷೆ

ಲಕ್ನೋ: 28 ವರ್ಷದ ಗಾಯಕಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಲಕ್ನೋ ಜ್ಞಾನಪುರ ಕ್ಷೇತ್ರದ ಮಾಜಿ ಶಾಸಕ ವಿಜಯ್‌ ಮಿಶ್ರಾಗೆ ಭದೋಹಿಯ ವಿಶೇಷ ಎಂಪಿ-ಎಂಎಲ್‌ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಜ್ಞಾನಪುರ ಕ್ಷೇತ್ರದ ಶಾಸಕರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಮಿಶ್ರಾ ಸಮಾಜವಾದಿ ಪಕ್ಷದ ಮಾಜಿ ಸದಸ್ಯರಾಗಿದ್ದಾರೆ. ಸದ್ಯ ಬಂಧಿತರಾಗಿರುವ ಅವರು ಆಗ್ರಾ ಕಾರಾಗೃಹದಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭದೋಹಿ ನ್ಯಾಯಾಲಯ ಮಿಶ್ರಾರನ್ನು ಶುಕ್ರವಾರ ದೋಷಿ ಎಂದು ಘೋಷಿಸಿದೆ. ಆದರೆ ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳಾಗಿರುವ ಮಿಶ್ರಾ ಅವರ ಪುತ್ರ ವಿಷ್ಣು ಹಾಗೂ ಸೋದರಳಿಯ ಜ್ಯೋತಿ ಅಲಿಯಾಸ್ ವಿಕಾಸ್ ಮಿಶ್ರಾ ಅವರನ್ನು ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳಿಸಿದೆ.

ಈ ಇಬ್ಬರನ್ನೂ ಸಂಶಯದ ಲಾಭದ ಮೇರೆಗೆ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ಭದ್ರೋಹಿ ಜಿಲ್ಲಾಡಳಿತದ ಪರ ನ್ಯಾಯವಾದಿ ದಿನೇಶ್ ಪಾಂಡೆ ತಿಳಿಸಿದ್ದಾರೆ.