ದಾಂಡೇಲಿ: ರಜೆಯಲ್ಲಿ ಮನೆಗೆ ಬಂದಿದ್ದ ಯುವಕ ಮರಳಿ ಗೋವಾಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿ ಬಳಿಕ ನಾಪತ್ತೆಯಾಗಿರುವ ಘಟನೆ ದಾಂಡೇಲಿ ತಾಲೂಕಿನ ಅಂಬೇವಾಡಿಯ ನವಗ್ರಾಮದ ಗಾಂವಠಾಣದಲ್ಲಿ ನಡೆದಿದೆ.
ನವಗ್ರಾಮ ಗಾಂವಠಾಣ ನಿವಾಸಿ ಆಕಾಶ್ ಚಂದ್ರಕಾಂತ ನಾಯ್ಕ(26) ಎಂಬಾತ ನಾಪತ್ತೆಯಾದ ಯುವಕ. ಗೋವಾದಲ್ಲಿ ಸ್ವಿಗ್ಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಕಾಶ್ ಚಂದ್ರಕಾಂತ ನಾಯ್ಕ್ ಸೆಪ್ಟೆಂಬರ್ 13ರಂದು ಗೋವಾದಿಂದ ನವಗ್ರಾಮದಲ್ಲಿರುವ ತನ್ನ ಮನೆಗೆ ಬಂದಿದ್ದ. ಮರಳಿ ಗೋವಾಕ್ಕೆ ಹೋದ ಬಳಿಕ ಆತನು ಮನೆಯವರಿಗೆ ಫೋನ್ ಮಾಡಿರಲಿಲ್ಲ. ಕಾರಣ ಕೇಳಿದಾಗ ಮೊಬೈಲ್ ಕಳುವಾಗಿರುತ್ತದೆ ಎಂದು ಹೇಳಿದ್ದನು. ಆದರೆ ಆ ಬಳಿಕದಿಂದ ಆತ ನಾಪತ್ತೆಯಾಗಿದ್ದಾನೆಂದು ಮನೆಯವರು ತಿಳಿಸಿದ್ದಾರೆ.
ಪುತ್ರ ಮರಳಿ ಮನೆಗೆ ಬರದೇ ಇರುವುದರಿಂದ ಆತನ ತಂದೆ ಚಂದ್ರಕಾಂತ್ ನಾಯ್ಕ ಅವರು ಗೋವಾಕ್ಕೆ ತೆರಳಿ ಅವರ ಸಂಬಂಧಿಕರ ಮನೆಗೆ ಹೋಗಿ ವಿಚಾರಿಸಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿಯೂ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಆಕಾಶ್ ಚಂದ್ರಕಾಂತ್ ನಾಯ್ಕ ಪತ್ತೆಯಾಗಿಲ್ಲ. ಆದ್ದರಿಂದ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪುತ್ರ ನಾಪತ್ತೆಯಾದ ಬಗ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.