ಪ್ರಖ್ಯಾತ ಯೂಟ್ಯೂಬರ್ 'ಟಿಟಿಎಫ್ ವಾಸನ್' ಚಾಲನಾ ಪರವಾನಿಗೆ 10 ವರ್ಷಗಳ ಕಾಲ ಅಮಾನತು



ತಮಿಳುನಾಡು: ಇಲ್ಲಿನ ಪ್ರಖ್ಯಾತ ಯೂಟ್ಯೂಬರ್ ಟಿಟಿಎಫ್ ವಾಸನ್ ಚಾಲನಾ ಪರವಾನಿಗೆಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯು ಬರೋಬ್ಬರಿ 10 ವರ್ಷಗಳ ಕಾಲ ಅಮಾನತುಗೊಳಿಸಿದೆ.

ಯೂಟ್ಯೂಬರ್ ಹಾಗೂ ಬೈಕ್ ರೈಡರ್ ಆಗಿರುವ ಟಿಟಿಎಫ್ ವಾಸನ್  ಚಾಲನಾ ಪರವಾನಿಗೆಯನ್ನು 10 ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಅಕ್ಟೋಬರ್ 5, 2033 ರವರೆಗೆ ವಾಸನ್ ಚಾಲನಾ ಪರವಾನಿಗೆಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ಕಾಂಚೀಪುರಂ ಪ್ರಾದೇಶಿಕ ಸಾರಿಗೆ ಕಚೇರಿ ತಿಳಿಸಿದೆ.


ಟಿಟಿಎಫ್ ವಾಸನ್ ಅಪರಾಧಿ ಹಾಗೂ ಆತನ ವಿರುದ್ಧ ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಅತಿರೇಕ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿರುವುದಕ್ಕೆ ವಿವಿಧ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಹಲವಾರು ಕೇಸ್​ಗಳು ಬಾಕಿ ಉಳಿದಿವೆ ಎಂದು ಕಾಂಚೀಪುರಂ ಪರವಾನಿಗೆ ಪ್ರಾಧಿಕಾರ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ಕಚೇರಿ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಟಿಟಿಎಫ್ ವಾಸನ್ ಸೆಪ್ಟೆಂಬರ್ 17 ರಂದು ಕಾಂಚೀಪುರಂ ಬಳಿ ತಮ್ಮ ದುಬಾರಿ ಮೋಟಾರ್‌ಬೈಕ್​ನಲ್ಲಿ ವ್ಹೀಲಿಂಗ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದರು. ಈ ಘಟನೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಲ್ಲದೆ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು.


ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ವಾಸನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಬಂಧನದಲ್ಲಿದ್ದು ಆತ ಪಾಠ ಕಲಿಯಬೇಕು ಎಂದು ಹೇಳಿದೆ. ತಮ್ಮ ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ಯೂಟ್ಯೂಬ್‌ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ವಾಸನ್​ ಹೊಂದಿದ್ದು, ಬೈಕ್​ ಸ್ಟಂಟ್ಸ್​ ಸೇರಿದಂತೆ ಹಲವಾರು ವಿಡಿಯೋಗಳನ್ನು ಪೋಸ್ಟ್​ ಮಾಡಿ, ನೆಟ್ಟಿಗರ ಗಮನ ಸೆಳೆಯುತ್ತಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu