ಮಂಗಳೂರು: ಯುವ ಕಬ್ಬಡ್ಡಿ ಆಟಗಾರನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ - ಲೋನ್ ಆ್ಯಪ್ ಕಿರುಕುಳವೇ ಕಾರಣ
Friday, September 1, 2023
ಮಂಗಳೂರು: ಜಿಲ್ಲಾ ಮಟ್ಟದ ಯುವ ಕಬಡ್ಡಿ ಆಟಗಾರ ಬೆಳ್ತಂಗಡಿ ಪುದುವೆಟ್ಟು ನಿವಾಸಿ ಸ್ವರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಸ್ವರಾಜ್ ಆತ್ಮಹತ್ಯೆಗೆ ಲೋನ್ ಆ್ಯಪ್ ಕಿರುಕುಳವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಸ್ವರಾಜ್ ಗುರುವಾರ ಬೆಳಗ್ಗೆ ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಸ್ವರಾಜ್ ವಾಟ್ಸ್ಆ್ಯಪ್ ನಲ್ಲಿ ತಮ್ಮ ಅಕ್ಕನ ಮಗುವಿನ ಫೋಟೊ ಹಾಕಿದ್ದರು. ಅದೇ ಫೋಟೊವನ್ನು ಮುಂದಿಟ್ಟು ಕಿರುಕುಳ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮಗುವಿನ ಫೋಟೋವನ್ನು ಲೋನ್ ಆ್ಯಪ್ ನವರು 'Baby for sale' ಎಂದು ಎಡಿಟ್ ಮಾಡಿ ಆತನ ಸ್ನೇಹಿತರು ಮತ್ತು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದವರಿಗೆಲ್ಲ ಫಾರ್ವರ್ಡ್ ಮಾಡಿದ್ದಾರೆ.
ಇದರಿಂದ ತೀವ್ರ ನೊಂದಿದ್ದ ಸ್ವರಾಜ್ ಒತ್ತಡ ತಡೆಯಲಾಗದೇ ಆ.30 ರಂದು 30 ಸಾವಿರ ರೂ. ಹಣವನ್ನು ಕಟ್ಟಿದ್ದರು. ಆದರೆ ಆ.31 ರಂದು ಮಧ್ಯಾಹ್ನ 2 ಗಂಟೆ ಒಳಗೆ ಉಳಿದ ಹಣ ಬಡ್ಡಿ ಸಹಿತ ನೀಡುವಂತೆ ಡೆಡ್ ಲೈನ್ ನೀಡಿದ್ದರು. ಇದರ ನಡುವಲ್ಲೇ ಹಿಂಸೆ ತಾಳಲಾರದೆ ಸ್ವರಾಜ್ ಗುರುವಾರ ಬೆಳಗ್ಗೆ ಮನೆಯ ಬಳಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯದ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.