ಮಂಗಳೂರು: ಕುಖ್ಯಾತ ರೌಡಿ ಸಿಸಿಬಿ ಬಲೆಗೆ - ಗೋವಾ, ಮುಂಬೈನಲ್ಲಿದ್ದುಕೊಂಡೇ ಗ್ಯಾಂಗ್ ಕಟ್ಟಿದ ಆರೋಪಿ

ಮಂಗಳೂರು: ನಗರದಲ್ಲಿ ಕೊಲೆ, ಕೊಲೆಯತ್ನ, ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ

ನಗರದ ಪಡೀಲ್ ಫೈಸಲ್ ನಗರ ನಿವಾಸಿ ಲೀಡರ್ ತಲ್ಲತ್ (39) ಬಂಧಿತ ವ್ಯಕ್ತಿ.

ತಲ್ಲತ್‌ ಗೋವಾ, ಮುಂಬೈನಲ್ಲಿದ್ದುಕೊಂಡೇ ರೌಡಿಸಂ ಲೋಕವನ್ನು ನಿಯಂತ್ರಿಸುತ್ತಿದ್ದ. ತಲ್ಲತ್ ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ಅಪರಾಧ ಪ್ರಕರಣ ಎದುರಿಸುತ್ತಿದ್ದಾನೆ.

ಇತ್ತೀಚೆಗೆ ತಲ್ಲತ್ ಮುಂಬೈನಿಂದ ಊರಿಗೆ ಬಂದಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನನ್ನು ಕೊಟ್ಟಾರದಲ್ಲಿ ಬಂಧಿಸಿದ್ದಾರೆ. ಬಳಿಕ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ, ಬರ್ಕೆ, ಮುಂಬೈ ಮುಂತಾದ ಕಡೆಗಳಲ್ಲಿ ಹಲ್ಲೆ, ಜೀವ ಬೆದರಿಕೆ, ಹಫ್ತಾ ವಸೂಲಿ, ದರೋಡೆ, ಕೊಲೆಯತ್ನ, ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲೈ ಅಪಹರಣ ಹೀಗೆ ಆರೋಪಿಯಾಗಿದ್ದಾನೆ. ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.