ಪುತ್ತೂರು: ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ 17 ವರ್ಷದ ಬಾಲಕ ಶಸ್ತ್ರಚಿಕಿತ್ಸೆಯ ಬಳಿಕ ಗಂಭೀರ ಪರಿಸ್ಥಿತಿಗೆ ತಲುಪಿ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಬಾಲಕನ ಸಂಬಂಧಿಕರು, ಸಾರ್ವಜನಿಕರು ಸೇರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಸೃಜಿತ್(17) ಮೃತಪಟ್ಟ ಬಾಲಕ.
ಶನಿವಾರ ಸಂಜೆ ಹೊಟ್ಟೆನೋವೆಂದು ಸೃಜಿತ್ ನನ್ನು ಪುತ್ತೂರಿನ ಚೇತನಾ ಆಸ್ಪತ್ರೆಗೆ ಕರೆತರಲಾಗಿತ್ತು. ಹೊಟ್ಟೆಯ ಕರುಳು ಒಂದಕ್ಕೊಂದು ಸೇರಿಕೊಂಡಿದೆ. ಶಸ್ತ್ರಚಿಕಿತ್ಸೆ ಆಗಬೇಕೆಂದು ವೈದ್ಯರು ಸೂಚಿಸಿದ್ದರು. ಅದರಂತೆ, ರವಿವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಸಂಜೆಯಾಗುತ್ತಿದ್ದಂತೆ ಬಾಲಕನ ಸ್ಥಿತಿ ವಿಪರೀತವಾಗಿ ತಲುಪಿದೆ. ವೈದ್ಯರು ಸಕಾಲದಲ್ಲಿ ಸ್ಪಂದಿಸದ ಕಾರಣ ಉಸಿರಾಟದ ಸಮಸ್ಯೆ ಎದುರಾಗಿದೆ.
ರಾತ್ರಿ ತಕ್ಷಣ ಸೃಜಿತ್ ನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಬೇಕು, ಇಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲವೆಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಬಾಲಕನನ್ನು ಸೋಮವಾರ ಬೆಳಗ್ಗಿನ ಹೊತ್ತಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ತರಲಾಗಿತ್ತು. ಆದರೆ ಅಲ್ಲಿ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು. ಇದರಿಂದ ಪುತ್ತೂರಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರ ವಿರುದ್ಧ ಸಂಬಂಧಿಕರ ಆಕ್ರೋಶ ತಿರುಗಿದ್ದು, ಮಂಗಳವಾರ ಮಧ್ಯಾಹ್ನದಿಂದಲೇ ಚೇತನಾ ಆಸ್ಪತ್ರೆಯ ಮುಂದೆ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಲ್ಲಿ ವೈದ್ಯರನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ.
ಬಳಿಕ ಪುತ್ತೂರು ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿದ್ದು, ಚೇತನಾ ಆಸ್ಪತ್ರೆಯಲ್ಲಿ ಈ ಹಿಂದೆಯೂ ಇದೇ ರೀತಿ ಎಡವಟ್ಟು ಆಗಿತ್ತು. ವೆಂಟಿಲೇಟರ್ ಇತ್ಯಾದಿ ವ್ಯವಸ್ಥೆ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದ್ದು ಯಾಕೆ, ಎಡವಟ್ಟು ಮಾಡಿರುವ ವೈದ್ಯರನ್ನು ಬಂಧಿಸಬೇಕು. ತಕ್ಷಣ ಕ್ರಮ ಜರುಗಿಸಬೇಕೆಂದು ಆಗ್ರಹ ಮಾಡಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸುತ್ತಾರೆಂದು ತಹಸೀಲ್ದಾರ್ ಸಮಜಾಯಿಷಿ ನೀಡಿದ್ದಾರೆ.