ಮಂಗಳೂರು: ಸೌಜನ್ಯಾಳಿಗೆ ಕೊಲೆ ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಕದ್ರಿ ಮಂಜುನಾಥನಿಗೆ ಮೊರೆ

ಮಂಗಳೂರು: ಧರ್ಮಸ್ಥಳ ಸೌಜನ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕೆಂದು ಮಂಗಳೂರಿನ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಪ್ರಾರ್ಥನೆ ನೆರವೇರಿತು.

ಸೌಜನ್ಯಾ ತಾಯಿ ಕುಸುಮಾವತಿ, ಮಾವ ವಿಠಲ ಗೌಡ, ಇನ್ನಿತರ ಸಾರ್ವಜನಿಕರು ಸೇರಿದಂತೆ ನೂರಾರು ಮಂದಿ ಸೇರಿ ಧರ್ಮಸ್ಥಳದ ಮೂಲಸ್ಥಾನವಾದ ಕದ್ರಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಬುಧವಾರ ಸಂಜೆ ದೇವಸ್ಥಾನದ ಪ್ರಾಂಗಣದಲ್ಲಿ ಸೇರಿದ ಭಕ್ತಸಮೂಹ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ್ದಾರೆ.

ಸೌಜನ್ಯಾ ಪ್ರಕರಣದಲ್ಲಿ ಕೋರ್ಟ್, ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ. ಇನ್ನು ಮುಂದೆ ದೇವರೇ ನ್ಯಾಯ ಕೊಡಿಸಬೇಕೆಂದು ಪ್ರಾರ್ಥಿಸಿದ್ದಾರೆ. ಅಲ್ಲದೆ, ಆಗಸ್ಟ್ 20ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಿದ್ದಾರೆ. 

ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿಯವರ ನೇತೃತ್ವದಲ್ಲಿ ಸೌಜನ್ಯಾ ತಾಯಿ ಕುಸುಮಾವತಿಯವರು ಸೇರಿದಂತೆ ನೂರಾರು ಮಂದಿ ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಅತ್ಯಾಚಾರ ಹಾಗೂ ಕೊಲೆ ಮಾಡಿದವರು ಯಾರೆಂದು ಬಯಲಾಗಬೇಕು. ಅವರಿಗೆ ಶಿಕ್ಷೆಯಾಗಬೇಕು. ಈ ಮೂಲಕ ಮೃತ ಸೌಜನ್ಯಾಳಿಗೆ ನ್ಯಾಯ ಸಿಗಬೇಕೆಂದು ಎಲ್ಲರೂ ಕದ್ರಿ ಶ್ರೀ ಮಂಜುನಾಥ ದೇವರ ಮೊರೆಹೊಕ್ಕರು.