ನಾಳೆ ( ಆ.30) ಗೃಹಲಕ್ಷ್ಮೀ ಯೋಜನೆಗೆ ಚಾಲನೆ - ಮಹಿಳೆಯರಿಗೆ ಸಿಗಲಿದೆ ರೂ 2000 - ಮಂಗಳೂರಿನಲ್ಲಿ ಎಲ್ಲೆಲ್ಲಿ ಕಾರ್ಯಕ್ರಮ
Tuesday, August 29, 2023
ಮಂಗಳೂರು:- ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ.
ಗೃಹಲಕ್ಷ್ಮೀ ಯೋಜನೆಗೆ ಆ.30ರಂದು ಮೈಸೂರಿನಿಂದ ಚಾಲನೆ ನೀಡಲಾಗುವುದು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಭಾಗವಹಿಸಲು ಅನುವಾಗುವಂತೆ ನಗರದ 33 ಸ್ಥಳಗಳಲ್ಲಿ ಟಿ.ವಿ./ಎಲ್.ಇ.ಡಿ. ಪರದೆ ಮೂಲಕ ಆ.30ರಂದು ಮಧ್ಯಾಹ್ನ 12ಗಂಟೆಗೆ ನೇರಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿದೆ.
ನೇರಪ್ರಸಾರದ ಸ್ಥಳ:
ಸುರತ್ಕಲ್‍ನ ತಡಂಬೈಲ್ ಕುಲಾಲ್ ಭವನ ಹಾಲ್, ಕಾಟಿಪಳ್ಳದ 3ನೇ ಬ್ಲಾಕ್‍ನ ನಾರಾಯಣ ಗುರು ಮಂದಿರ, ಕಾಟಿಪಳ್ಳ ಕೃಷ್ಞಾಪುರದಲ್ಲಿರುವ ದೂಮಾವತಿ ದೈವಸ್ಥಾನದ ಹಾಲ್, ಸುರತ್ಕಲ್‍ನ ಸೇಕ್ರೇಡ್ ಹಾರ್ಟ್ ಚರ್ಚ್ ಹಾಲ್, ಕುಳಾಯಿಯ ಮಹಿಳಾ ಮಂಡಲ(ರಿ), ಮೀನಕಳಿಯಲ್ಲಿರುವ ಇಂದಿರಾ ಮಾಧವ ವಿದ್ಯಾರ್ಥಿ ಭವನ, ಕೂಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣ, ಮರಕಡದಲ್ಲಿರುವ ಕೆ.ಎಚ್.ಬಿ. ಬಾಲಭವನ, ಕಾವೂರು ಮುಖ್ಯ ರಸ್ತೆಯ ವ್ಯವಸಾಯ ಸಹಕಾರಿ ಸೌಧ, ಕೋಡಿಕಲ್‍ನ ಕುದ್ಮುಲ್ ರಂಗರಾವ್ ಸಮುದಾಯ ಭವನ, ವಾಮಂಜೂರುನಲ್ಲಿರುವ ತಿರುವೈಲ್ ವಾರ್ಡು ಕಚೇರಿ, ಶಕ್ತಿನಗರದ ಮದರ್ ಆಫ್ ಗಾಡ್ ಚರ್ಚ್ ಕಮ್ಯುನಿಟಿ ಹಾಲ್, ಚಿಲಿಂಬಿಯಲ್ಲಿರುವ ಆದರ್ಶ ನಗರ ಸಮುದಾಯ ಭವನ, ಕೊಟ್ಟಾರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣ, ಉರ್ವ ಹೊಸ ಮಾರುಕಟ್ಟೆ ಸಭಾಂಗಣ, ಬಳ್ಳಾಲ್‍ಬಾಗ್‍ನ ಅಂಬೇಡ್ಕರ್ ಭವನ, ಬಿಜೈ ಚರ್ಚ್‍ನ ಮಿನಿ ಹಾಲ್, ಮಲ್ಲಿಕಟ್ಟದ ಲಯನ್ಸ್ ಕ್ಲಬ್, ಮರೋಳಿಯ ಬಜ್ಜೋಡಿ ಚರ್ಚ್ ಹಾಲ್, ಕುಲಶೇಖರ ಚರ್ಚ್‍ನ ಮಿನಿ ಹಾಲ್, ಬಲ್ಮಠದ ಶಾಂತಿ ನಿಲಯ ಚರ್ಚ್ ಹಾಲ್, ಜೆಪ್ಪುವಿನಲ್ಲಿರುವ ಇನ್‍ಫೆಂಟ್ ಮೇರಿ ಹಾಲ್, ಟೆಂಪಲ್ ಸ್ಕ್ವೇರ್ ಜಿ.ಎಚ್.ಎಸ್. ರಸ್ತೆಯಲ್ಲಿರುವ ಬಾಲಮ್ ಭಟ್ ಹಾಲ್, ಕುದ್ರೋಳಿಯ ಮೈದಿನ್ ಪಳ್ಳಿ ಮದರಸಾ ಹಾಲ್, ಪುರಭವನದ ಕುದ್ಮುಲ್ ರಂಗರಾವ್ ಹಾಲ್, ಅತ್ತಾವರದ ಚಕ್ರಪಾಣಿ ದೇವಸ್ಥಾನದ ಹಾಲ್, ಕಂಕನಾಡಿ ಗರೋಡಿ ದೇವಸ್ಥಾನದ ಹಾಲ್, ಕಣ್ಣೂರುನಲ್ಲಿರುವ ಗಣೇಶೋತ್ಸವ ಮಂಟಪ, ಬಜಾಲ್‍ನ ಚರ್ಚ್ ಹಾಲ್, ಮಹಾಕಾಳಿಪಡ್ಪುವಿನ ಸಂಕಪ್ಪ ಮೆಮೋರಿಯಲ್ ಹಾಲ್, ಎಮ್ಮೆಕೆರೆಯ ಕೋರ್ದಬ್ಬು ದೈವಸ್ಥಾನ ಸಭಾಂಗಣ, ಹೊಯಿಗೆ ಬಜಾರ್ನ ಬೋಳಾರ ಮೊಗವೀರ ಮಹಿಳಾ ಸಂಘ ಸಭಾಂಗಣ ಹಾಗೂ ತೋಟ ಬೆಂಗ್ರೆಯಲ್ಲಿರುವ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲಾಗುವುದು.
ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಸಂದೇಶ ಬರುವುದರಿಂದ ನೋಂದಾಯಿತ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿಕೊಂಡಿರುವ ಮೊಬೈಲ್ ಫೋನ್‍ಗಳೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.