ಪತಿಯ ಕಣ್ಣಿಗೆ ಕಾರದ ಪುಡಿ ಎರಚಿ ಪತ್ನಿಯ ಹೊತ್ತೊಯ್ದರು: ಮದುವೆಯಾದ ಒಂದೇ ತಿಂಗಳಿಗೆ ದಂಪತಿ ಬಾಳಲ್ಲಿ ಬಿರುಗಾಳಿ


ಗದಗ: ಪ್ರೇಮವಿವಾಹವಾದ ಜೋಡಿಯ ಬಾಳಲ್ಲಿ ಮದುವೆಯಾದ ಒಂದೇ ತಿಂಗಳಲ್ಲಿ ಬಿರುಗಾಳಿ ಎದ್ದಿದೆ. ಪತ್ನಿಯ ಮನೆಯವರು ಪತಿಯ ಕಣ್ಣಿಗೆ ಕಾರದಪುಡಿ ಎರಚಿ ಆಕೆಯನ್ನು ಹೊತ್ತೊಯ್ಯಿದ್ದಿದ್ದಾರೆ. ಗದಗದ ಡಿಸಿ ಮಿಲ್ ನಲ್ಲಿ ಈ ಪ್ರಕರಣ ನಡೆದಿದೆ.

 ಗದಗದ ಅಭಿಷೇಕ್ ಹಾಗೂ ಹುಬ್ಬಳ್ಳಿಯ ಐಶ್ವರ್ಯ ಪ್ರೀತಿಸುತ್ತಿದ್ದು, ಪ್ರೇಮವಿವಾಹ ಆಗಿದ್ದರು. ಇವರ ಮದುವೆಗೆ ಐಶ್ವರ್ಯ ಮನೆಯವರ ವಿರೋಧವಿತ್ತು. ಆದರೂ ಅದನ್ನು ಲೆಕ್ಕಿಸದೆ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ ಇವರು, ಜೂ. 23ರಂದು ಗದಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ಡ್ ಮದುವೆಯಾಗಿದ್ದರು.

ಅಭಿಷೇಕ್ ಹಾಗೂ ಐಶ್ವರ್ಯ ಜುಲೈ 14ರಂದು ಆರತಕ್ಷತೆ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದ್ದರು. ಆದರೆ ಆಗಲೇ ಅವರಿಗೆ ದೊಡ್ಡದೊಂದು ಆಘಾತ ಎದುರಾಗಿದೆ.  ಐಶ್ವರ್ಯ ಮನೆಯವರು ಏಕಾಏಕಿ ಅಭಿಷೇಕ್ ನಿವಾಸಕ್ಕೆ ಬಂದು ಆತನ ಕಣ್ಣಿಗೆ ಕಾರದಪುಡಿ ಎರಚಿ, ಐಶ್ವರ್ಯಾಳನ್ನು ಹೊತ್ತುಕೊಂಡು ವಾಹನದಲ್ಲಿ ಕರೆದೊಯ್ದು ಪರಾರಿಯಾಗಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಅಭಿಷೇಕ್ ಗದಗ ಪೊಲೀಸರ ಮೊರೆ ಹೋಗಿದ್ದಾನೆ.