ಕುಂದಾಪುರ: ವಿವಾಹವಾಗಿ ನಾಲ್ಕೇ ದಿನ ಪತಿಯ ಮನೆಯಲ್ಲಿದ್ದ ವಧು 10ಲಕ್ಷ ರೂ. ಚಿನ್ನ, ವಜ್ರಾಭರಣದೊಂದಿಗೆ ಪರಾರಿ


ಕುಂದಾಪುರ: ಮನೆಮಂದಿಯ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಮದುವೆಯಾದ ಯುವತಿಯು ಚಿನ್ನಾಭರಣದೊಂದಿಗೆ ಮನೆ ತೊರೆದು ಪತಿ ಹಾಗೂ ಆತನ ಕುಟುಂಬದವರಿಗೆ ವಂಚಿಸಿರುವ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ಸಂಪಿಗೇಡಿ ಉಳ್ಳೂರು 74ರ ನಿವಾಸಿ ಸಂಕೇತ್ ಶೆಟ್ಟಿ (31) ಎಂಬವರು ಸ್ಪೂರ್ತಿ ಶೆಟ್ಟಿ ಎಂಬಾಕೆಯನ್ನು ಮೇ 21ರಂದು ವಿವಾಹವಾಗಿದ್ದರು. ವಿವಾಹದ ಬಳಿಕ ಕೇವಲ 4 ದಿನಗಳ ಕಾಲ ಮಾತ್ರ ಮನೆಯಲ್ಲಿ ಸರಿಯಾಗಿ ಇದ್ದ ಸ್ಪೂರ್ತಿ ಶೆಟ್ಟಿ ಆ ಬಳಿಕ ಪದೇ ಪದೇ ತವರು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ಪತಿಯ ಕಡೆಯವರು ವಿಚಾರಿಸಿದರೆ, ತಾನು ಮನೆಯವರ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಸಂಕೇತ್ ಶೆಟ್ಟಿಯನ್ನು ಮದುವೆಯಾಗಿದ್ದಾನೆ. ತನಗೆ ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು ಎಂದು ತಿಳಿಸಿದ್ದಾರೆ. ಅದಕ್ಕೆ ಪತಿ ಸಂಕೇತ್ ಶೆಟ್ಟಿಯೂ ಒಪ್ಪಿಗೆ ಸೂಚಿಸಿದ್ದರು.


ಆದರೆ ದಿನ ಕಳೆದಂತೆ ಆಕೆ ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು, ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವುದು ಪತಿಯ ಗಮನಕ್ಕೆ ಬಂದಿದೆ. ಇದರ ಬಗ್ಗೆ ವಿಚಾರಿಸಿದಾಗ ತಾನು ನವೀನ್‌ ಎಂಬಾತನನ್ನು ಇಷ್ಟಪಟ್ಟಿದ್ದೆ. ಆತನನ್ನೇ ವಿವಾಹವಾಗಲು ಬಯಸಿದ್ದೆ. ಈ ವಿಚಾರ ಮನೆಯವರಿಗೂ ತಿಳಿದಿತ್ತು ಎಂದು ತಿಳಿಸಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಕೇತ್ ಶೆಟ್ಟಿ ನಿನಗೆ ಈಗ ಮದುವೆಯಾಗಿದ್ದು ಇನ್ನು ಆ ರೀತಿ ಇರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಸಂಕೇತ್ ಶೆಟ್ಟಿ ಆಕೆಯ ಮನೆಯವರಲ್ಲಿ ತಿಳಿಸಿದಾಗ ಆಕೆ ಹೇಳಿದಂತೆ ನೀನು ಇದ್ದುಬಿಡು. ಇಲ್ಲವಾದರೆ ನೀನು ಆಕೆಗೆ ಹಿಂಸೆ ನೀಡಿದ್ದಿ ಎಂದು ಪ್ರಕರಣ ನೀಡಿ ಜೈಲಿಗಟ್ಟುತ್ತೇವೆ ಎಂದು ಬೆದರಿಸಿದ್ದಾರೆ. ಆ ಬಳಿಕ ಸ್ಪೂರ್ತಿ ಶೆಟ್ಟಿ ಮದುವೆ ಸಂದರ್ಭದಲ್ಲಿ ತನಗೆ ನೀಡಿದ್ದ 10 ಲಕ್ಷ ಮೌಲ್ಯದ ಚಿನ್ನ, ವಜ್ರದ ಆಭರಣಗಳ ಸಮೇತ ಪತಿಮನೆ ತೊರೆದಿದ್ದಾರೆ.

ಈ ಕುರಿತು ಸಂಕೇತ್ ಶೆಟ್ಟಿಯವರು ಪತ್ನಿ ಸ್ಪೂರ್ತಿ ಶೆಟ್ಟಿ ಮತ್ತು ಆಕೆಯ ಮನೆಯವರ ವಿರುದ್ಧ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

BREAKING NEWS
Loading latest news...
Join our WhatsApp Channel Powered By : Online Pudu