
ಮೊದಲರಾತ್ರಿ ಕೋಣೆ ಸೇರಿ ಹೊಟ್ಟೆನೋವೆಂದು ನರಳಿದ ವಧುವಿಗೆ ಮರುದಿನವೇ ಹೆರಿಗೆ - ಬೆಚ್ಚಿಬಿದ್ದ ವರ
Friday, June 30, 2023
ಉತ್ತರ ಪ್ರದೇಶ: ಮೊದಲರಾತ್ರಿ ವಧು ಕೋಣೆ ಸೇರುತ್ತಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡು ನರಳಿದ್ದಾಳೆ. ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರ ಮಾತು ಕೇಳಿ, ವರ ಒಂದುಕ್ಷಣ ದಿಗ್ಭ್ರಾಂತನಾಗಿದ್ದಾನೆ.
ಕಳೆದ ಸೋಮವಾರ ಗ್ರೇಟರ್ ನೋಯ್ಡಾದ ಹಳ್ಳಿಯ ಯುವಕ ಸಿಕಂದ್ರಾಬಾದ್‌ನ ಯುವತಿಯೊಬ್ಬಳನ್ನು ವಿವಾಹವಾಗಿದ್ದಾನೆ. ಮದುವೆ ಕಾರ್ಯಕ್ರಮ ಸುಸೂತ್ರವಾಗಿ ನಡೆದು ಅಂದು ರಾತ್ರಿಯೇ ವಧು-ವರರಿಬ್ಬರೂ ಪ್ರಥಮ ರಾತ್ರಿಗೆಂದು ಕೋಣೆ ಸೇರಿದ್ದಾರೆ. ಆದರೆ ಈ ವೇಳೆ ಆಕೆಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಆಕೆ ಗರ್ಭಿಣಿ ಶೀಘ್ರದಲ್ಲೇ ಆಕೆ ಮಗುವಿಗೆ ಜನ್ಮನೀಡಲಿದ್ದಾಳೆಂದು ಹೇಳಿದ್ದಾರೆ. ಇದನ್ನು ಕೇಳಿದ ವರನಿಗೆ ಒಂದು ಕ್ಷಣ ಏನೂ ತೋಚದಂತಹ ಪರಿಸ್ಥಿತಿ.
ಮರುದಿನವೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಸಲಿಗೆ ಯುವತಿ ಮದುವೆಗೂ ಮೊದಲೇ ಗರ್ಭ ಧರಿಸಿದ್ದಳು. ಆದರೆ ಪಾಲಕರು ಈ ವಿಚಾರವನ್ನು ವರನ ಮನೆಯವರಿಗೆ ತಿಳಿಸದೆ ಆಕೆಗೆ ಮದುವೆ ಮಾಡಿದ್ದಾರೆ.
ಮದುವೆ ಮಾತುಕತೆ ವೇಳೆ ಪುತ್ರಿ ಶಸ್ತ್ರಚಿಕಿತ್ಸೆಗೊಳಗಾಗಿ ಹೊಟ್ಟೆ ಸ್ವಲ್ಪ ಊದಿಕೊಂಡಿದೆ ಎಂದು ವರನ ಮನೆಯವರಿಗೆ ತಿಳಿಸಲಾಗಿತ್ತು. ಇದನ್ನು ನಂಬಿದ್ದ ಯುವಕ ಆಕೆಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದ. ಇದೀಗ ಆಕೆ ಮದುವೆಯಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡು ಆತ ಆಘಾತಕ್ಕೊಳಗಾಗಿದ್ದಾನೆ.
ಹೆರಿಗೆಯಾಗುತ್ತಿದ್ದಂತೆ ಯುವತಿ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಅವರು ಸಿಕಂದ್ರಾಬಾದ್‌ನಿಂದ ಬಂದು ತಾಯಿ ಮತ್ತು ಮಗುವನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಎರಡೂ ಕುಟುಂಬಗಳು ಮಾತುಕತೆ ಮೂಲಕ ಒಪ್ಪಂದ ಮಾಡಿಕೊಂಡಿದ್ದು ನೂತನ ವಧು- ವರರು ದೂರವಾಗಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಬಂದಿದೆ ಎಂದು ದಂಕೌರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜಯ್ ಸಿಂಗ್ ಹೇಳಿದ್ದಾರೆ.