ಚಾಕಲೇಟ್ ನೀಡಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ‌ ಪೋರ್ನ್ ವೀಡಿಯೋ ತೋರಿಸುತ್ತಿದ್ದ ಶಿಕ್ಷಕ


ಹರಿಯಾಣ: ಸರ್ಕಾರಿ ಶಾಲಾ ಶಿಕ್ಷಕನೋರ್ವನು ತನ್ನ ಮೊಬೈಲ್ ಫೋನ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ ಘಟನೆ ಹರಿಯಾಣದ ಪಂಚಕುಲದ ರಾಯ್ಸುರ್‌ರಾಣಿ ಪಟ್ಟಣದಲ್ಲಿ ಬಳಿ ನಡೆದಿದೆ. ಇದೀಗ ಈತನ ಮೇಲೆ ಪೊಕ್ಸೊ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ.

ಬಂತ್ ಸಿಂಗ್ ಮಕ್ಕಳಿಗೆ ಅಶ್ಲೀಲ ವೀಡಿಯೋ ತೋರಿಸುತ್ತಿದ್ದ ಆರೋಪಿ. ಈತ ರಾಯ್ಸುರ್‌ರಾಣಿ ಪಟ್ಟಣದ ಬಳಿ ಇರುವ ಶಾಲೆಯಲ್ಲಿ ಪಂಜಾಬಿ ಭಾಷೆ ಕಲಿಸುವ ಶಿಕ್ಷಕ. ಈತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಾಕೊಲೇಟ್‌ಗಳನ್ನು ನೀಡಿ ಬಳಿಕ ಪುಸಲಾಯಿಸಿ ತನ್ನ ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಪೋಷಕರು ಶಾಲೆಯ ಮುಂದೆ ಧರಣಿ ನಡೆಸಿದ್ದರು. ಈ ನಡುವೆ ಈ ಪ್ರಕರಣವನ್ನು ಮಾತುಕತೆಯ ಮೂಲಕ ಬಗೆಹರಿಸಿ ಮುಚ್ಚಿ ಹಾಕುವ ಯತ್ನಿಸಲಾಗಿತ್ತು. ಕೊನೆಗೆ ಆರೋಪಿಯ ವಿರುದ್ಧ ಪಾಲಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ವಿಷಯ ತಿಳಿದ ತಕ್ಷಣ ಆರೋಪಿ ಪರಾರಿಯಾಗಿದ್ದಾನೆ.

ಪೋಕ್ಸೊ ಕಾಯ್ದೆಯಡಿ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಿಲ್ಲಾ ಶಿಕ್ಷಣ ಕಚೇರಿಯೂ ಘಟನೆಯ ಕುರಿತು ಪ್ರತ್ಯೇಕ ತನಿಖೆಗೆ ಆದೇಶಿಸಿದೆ.