ಒಂದು ಲಕ್ಷ ರೂ. ಲಂಚ ಬೇಡಿಕೆ: ವೀಡಿಯೋ ರೆಕಾರ್ಡ್ ಮಾಡಿದ್ದಕ್ಕೆ ಅನುಚಿತ ರೀತಿಯಲ್ಲಿ ವರ್ತಿಸಿ ಮೊಬೈಲ್ ಒಡೆದು ಹಾಕಿದ ಮಹಿಳಾ ಕಾರ್ಮಿಕ ಅಧಿಕಾರಿ
Friday, June 9, 2023
ಲಖನೌ: ಮಹಿಳಾ ಕಾರ್ಮಿಕ ಅಧಿಕಾರಿಯ ವಿರುದ್ಧ ಬರೋಬ್ಬರಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪವೊಂದು ಕೇಳಿಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುವುದರೊಂದಿಗೆ ಅಧಿಕಾರಿಯ ವಿರುದ್ಧ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.
ಈ ವೀಡಿಯೋದಲ್ಲಿ ಮಹಿಳಾ ಅಧಿಕಾರಿ ತಾಳ್ಮೆ ಕಳೆದುಕೊಂಡು, ಲಂಚ ಕೇಳಿದ ವೀಡಿಯೋ ರೆಕಾರ್ಡ್ ಇದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಒಡೆದು ಹಾಕಿರುವ ದೃಶ್ಯವಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಯ ವರ್ತನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆಕೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ಈ ಘಟನೆ ಉತ್ತರಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಆದರೆ ಅಧಿಕಾರಿಯ ಹೆಸರು ಬಹಿರಂಗಪಡಿಸಿಲ್ಲ. ಆದರೆ, ಆಕೆಯ ಅನುಚಿತ ವರ್ತನೆಯು 30 ಸೆಕೆಂಡ್ ವಿಡಿಯೋದಲ್ಲಿ ಸೆರೆಯಾಗಿದೆ. ಸರ್ಕಾರಿ ಕೆಲಸ ಮಾಡಿಕೊಡಲು ಮಹಿಳಾ ಅಧಿಕಾರಿಯು ಹಣಕ್ಕೆ ಬೇಡಿಕೆ ಇಡುತ್ತಿರುವ ದೃಶ್ಯವನ್ನು ಗೂಡು ವ್ಯಾಪಾರಿ ಒಬ್ಬ ರೆಕಾರ್ಡ್ ಮಾಡಿದ್ದಾನೆ. ಈ ವೇಳೆ ವಿಡಿಯೋ ಏಕೆ ಮಾಡುತ್ತೀಯ ಎಂದು ಅಧಿಕಾರಿ ಪ್ರಶ್ನೆ ಮಾಡಿದ್ದಾಳೆ. ಆದರೂ, ವಿಡಿಯೋ ರೆಕಾರ್ಡ್ ಮುಂದುವರಿಸಿದ್ದಕ್ಕೆ ಆಕ್ರೋಶಗೊಂಡ ಅಧಿಕಾರಿ ಮೊಬೈಲ್ ಕಸಿದುಕೊಂಡು ಒಡೆದು ಹಾಕಿದ್ದಾಳೆ.
ಈ ಘಟನೆಯ ಬಳಿಕ ಗೂಡು ವ್ಯಾಪಾರಿ ಬಾಗ್‌ಪತ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಗೆ ದೂರು ನೀಡಿ ಮಹಿಳಾ ಕಾರ್ಮಿಕ ಅಧಿಕಾರಿ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದೀಗ ಆಕೆಯ ಮೇಲೆ ಲಂಚ ಪಡೆಯಲು ಯತ್ನ ಮತ್ತು ಸಾಕ್ಷ್ಯನಾಶ ಪ್ರಕರಣ ದಾಖಲಾಗಿದೆ.