ಇಸ್ಲಾಂಗೆ ಮತಾಂತರಗೊಂಡು ವಿವಾಹವಾದ ಹಿಂದೂ ಯುವತಿ: ಬೇಸತ್ತ ತಂದೆ ಠಾಣೆಯಲ್ಲಿ ಮಾಡಿದ್ದೇನು ಗೊತ್ತೇ
Monday, June 26, 2023
ಮಧ್ಯಪ್ರದೇಶ: ಕುಟುಂಬಸ್ಥರನ್ನು ವಿರೋಧಿಸಿ ಮುಸ್ಲಿಂ ಯುವಕನನ್ನು ಹಿಂದೂ ಯುವತಿ ವಿವಾಹವಾದ ಪ್ರಕರಣ ಠಾಣೆ ಮೆಟ್ಟಿಲೇರಿದೆ. ಈ ವೇಳೆ ಪಾಲಕರು ತಮ್ಮೊಂದಿಗೆ ಬರಲೊಪ್ಪದ ಪುತ್ರಿ ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆಂದು ಪೊಲೀಸರ ಮುಂದೆಯೇ ಆಕೆಗೆ ಬಿಳಿ ಬಟ್ಟೆ ಸುತ್ತಿ, ಹೂವಿನ ಮಾಲೆ ಹಾಕಿರುವ ಘಟನೆ ಮಂಡ್ ಸೌರ್ ಜಿಲ್ಲೆಯ ನಹರ್‌ಗಢ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆಸ್ತಾ ಎಂಬ ಯುವತಿ ಒಂದು ವರ್ಷದ ಹಿಂದೆ ಸಾಹಿಲ್ ಎಂಬಾತನೊಂದಿಗೆ ಓಡಿ ಹೋಗಿ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಕಾಲೇಜಿಗೆ ಹೋಗಿದ್ದ ಪುತ್ರಿ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಗೋವಿಂದ್ ಸೋನಿ ದೂರು ದಾಖಲಿಸಿದ್ದರು. ಪೊಲೀಸ್ ತನಿಖೆಯಲ್ಲಿ ಕೃತ್ಯ ಬಯಲಾಗಿತ್ತು. ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಆಸ್ತಾ ಒಂದು ವರ್ಷದ ಬಳಿಕ ಪತಿಯೊಂದಿಗೆ ನಹರ್‌ಗಢ ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಈ ವೇಳೆ ಪಾಲಕರು ಪುತ್ರಿಯ ಮನವೋಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆಸ್ತಾ ಮಾತ್ರ ಸಾಹಿಲ್‌ನನ್ನು ಬಿಟ್ಟು ಬರಲು ತಯಾರಿರಲಿಲ್ಲ. ಪರಿಣಾಮ ಆಕೆಯ ತಂದೆ ಪುತ್ರಿಗೆ ಹೆಣಕ್ಕೆ ಸುತ್ತುವ ಬಟ್ಟೆ ಸುತ್ತಿ, ಮಾಲಾರ್ಪಣೆ ಮಾಡಿ ತನ್ನ ಪಾಲಿಗೆ ಆಕೆ ಸತ್ತು ಹೋಗಿದ್ದಾಳೆಂದು ಹೇಳಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಸ್ತಾ, ಗಂಡನೊಂದಿಗೆ ಅಲ್ಲಿಂದ ಹೊರಟು ಹೋಗಿದ್ದಾಳೆ.
ಪಾಲಕರು ಪುತ್ರಿಗೆ ಹೆಣದ ಬಟ್ಟೆ ಸುತ್ತುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಆಸ್ತಾ ತಂದೆ ಪ್ರತಿಕ್ರಿಯಿಸಿ, ಕಾಲೇಜಿಗೆ ಹೋಗಿದ್ದ ಪುತ್ರಿ ಬಸ್ ನಿಲ್ದಾಣದಿಂದ ಓಡಿ ಹೋಗಿದ್ದಳು. ಬಳಿಕ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆ. ಇದೀಗ ಒಂದು ವರ್ಷದ ಬಳಿಕ ತನ್ನ ವಕೀಲರೊಂದೊಗೆ ಠಾಣೆಗೆ ಬಂದು ಹೇಳಿಕೆ ನೀಡಿದ್ದಾಳೆ. ಇದನ್ನು ನಾನು ಒಪ್ಪುವುದಿಲ್ಲ. ಹೀಗಾಗಿ ಪುತ್ರಿ ಸತ್ತಿದ್ದಾಳೆಂದು ಭಾವಿಸಿ ಅವಳಿಗೆ ಹೆಣದ ಬಟ್ಟೆ ಹೊದಿಸಿರುವುದಾಗಿ ತಿಳಿಸಿದ್ದಾರೆ.