ಅನ್ಯಜಾತಿಯ ಯುವಕನನ್ನು ವರಿಸಿದ ಅಪ್ರಾಪ್ತೆ : ಮರ್ಯಾದೆಗೆ ಅಂಜಿ ಯುವಜೋಡಿಯನ್ನು ಕೊಲೆಗೈದ ಪೋಷಕರು


ಉನ್ನಾವೋ: ಅನ್ಯಜಾತಿಯ ಯುವಕನನ್ನು ವಿವಾಹವಾದ ಕಾರಣಕ್ಕೆ ಅಪ್ರಾಪ್ತ ಬಾಲಕಿಯ ಸಂಬಂಧಿಕರು ಯುವಜೋಡಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಇದೀಗ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಠಾಕೂರ್ ಸಮುದಾಯಕ್ಕೆ ಸೇರಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೂ ದಲಿತ ಸಮುದಾಯಕ್ಕೆ ಸೇರಿದ್ದ 19ವರ್ಷದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ತಮ್ಮ ಪುತ್ರಿಯು ಕೆಳಜಾತಿಯ ಯುವಕನನ್ನು ಮದುವೆಯಾಗಿರುವ ವಿಚಾರ ಪೋಷಕರಿಗೆ ಗೊತ್ತಾಗಿದೆ. ಅಲ್ಲದೆ ಜೋಡಿಯು ವಿವಾಹದ ಬಳಿಕ ಖಾಯಂಪುರ ನಿವಾರವರ ಗ್ರಾಮದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ತಕ್ಷಣ ಕುಟುಂಬದ ಇತರ ಸದಸ್ಯರೊಂದಿಗೆ ಗ್ರಾಮಕ್ಕೆ ದೌಡಾಯಿಸಿದ ಬಾಲಕಿ ತಂದೆ ಜೋಡಿಯನ್ನು ಹತ್ಯೆ ಮಾಡಿ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸಿವಾನ್ ಪೊಲೀಸ್ ಠಾಣಾಧಿಕಾರಿ ಅಖಿಲೇಶ್ ತಿವಾರಿ 'ಘಟನೆ ನಡೆದ ಹಿಂದಿನ ದಿನ ಮೃತ ಬಾಲಕಿಯ ತಂದೆ ತಮ್ಮ ಪುತ್ರಿಯನ್ನು ಯುವಕನೊಬ್ಬ ಅಪಹರಣ ಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಮಂಗಳವಾರ ಬೆಳಗ್ಗೆ ಯುವಕನ ತಂದೆ ಬಾಲಕಿಯ ಕುಟುಂಬಸ್ಥರ ವಿರುದ್ಧ ತಮ್ಮ ಪುತ್ರನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.'

ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪುತ್ರಿ ಕೆಳ ಜಾತಿಯ ಯುವಕನನ್ನು ವರಿಸಿದ ಕಾರಣ ಮರ್ಯಾದೆಗೆ ಅಂಜಿ ಕೃತ್ಯ ಎಸಗಿರುವುದಾಗಿ ತಪೊಪ್ಪಿಕೊಂಡಿದ್ದಾರೆ. 

ಮೊದಲಿಗೆ ದಂಪತಿಯನ್ನು ಕೊಂದಿದ್ದಾರೆ. ಆ ಬಳಿಕ ಅವರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಮೃತದೇಹಗಳನ್ನು ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲಾಯಿತು ಎಂದು ಬಾಲಕಿಯ ತಂದೆ ಪೊಲೀಸರ ಮುಂದೆ ತಪ್ರೊಪ್ಪಿಕೊಂಡಿದ್ದಾನೆ.