'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾ ಮೊಬೈಲ್ ನಂಬರ್ ವೈರಲ್: ಮೆಸೇಜ್, ಕಾಲ್ ಮಾಡಿ ಕಿರುಕುಳ
ಮುಂಬಯಿ: 'ದಿ ಕೇರಳ ಸ್ಟೋರಿʼ ಸಿನಿಮಾ ನಟಿ ಅದಾ ಶರ್ಮಾ ಸಿನಿಮಾ ರಿಲೀಸ್ ಆದ ಬಳಿಕದಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅವರ ನಟನೆಯ ಬಗ್ಗೆ ಸಿನಿಮಾ ಪ್ರಿಯರು ಶಹಬ್ಬಾಸ್ ಎಂದಿದ್ದಾರೆ. ಇನ್ನೊಂದೆಡೆ ಕೆಲವರು ಈ ಸಿನಿಮಾವನ್ನು ಆಯ್ದುಕೊಂಡ ಬಗ್ಗೆಯೂ ಕೆಲವರು ಅವರ ವಿರುದ್ಧ ಕಿಡಿಕಾರಿದ್ದಾರೆ.
ವಿವಾದದ ಹೊರತಾಗಿಯೂ ಸುದೀಪ್ತೋ ಸೇನ್ ನಿರ್ದೇಶನದ ಸಿನಿಮಾವು 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಸಿನಿಮಾ ಅಭೂತಪೂರ್ವವಾಗಿ ಯಶಸ್ಸುಗೊಳಿಸಿರುವ ಪ್ರೇಕ್ಷಕರಿಗೆ ನಟಿ ಅದಾ ಶರ್ಮಾ ಧನ್ಯವಾದ ತಿಳಿಸಿದ್ದಾರೆ. ಆದರೆ ಸಿನಿಮಾ ರಿಲೀಸ್ ಆದಾಗಿನಿಂದ ಸಿನಿಮಾ ತಂಡಕ್ಕೆ ಕೆಲವರಿಂದ ಬೆದರಿಕೆಗಳು ಬಂದಿರುವುದು ವರದಿಯಾಗಿತ್ತು. ಇದೀಗ ನಟಿ ಅದಾ ಶರ್ಮಾ ವೈಯಕ್ತಿಕ ಫೋನ್ ನಂಬರ್ ಅನ್ನು ಹ್ಯಾಕರ್ ವೊಬ್ಬ ಲೀಕ್ ಮಾಡಿದ್ದಾನೆ ಎನ್ನಲಾಗಿದೆ.
ಈತ ಇನ್ ಸ್ಟಾಗ್ರಾಂ ಖಾತೆಯಲ್ಲಿ ನಟಿಯ ಫೋನ್ ನಂಬರ್ ಲೀಕ್ ಮಾಡಿದ್ದಾನೆ. ಈ ನಂಬರ್ ಪಡೆದ ಕೆಲವರು ನಟಿಗೆ ನಾನಾ ರೀತಿಯಲ್ಲಿ ಮೆಸೇಜ್ ಗಳನ್ನು ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಹ್ಯಾಕರ್ 'ಅದಾ ಶರ್ಮಾ ತನ್ನಿಂದ ಬೇಸರದಲ್ಲಿದ್ದಾರೆ. ಇನ್ನೊಮ್ಮೆ ಮುಸ್ಲಿಮರ ವಿರುದ್ಧದ ಸಿನಿಮಾ ಆಫರ್ ದೊರಕಿದ್ದಲ್ಲಿ ರಿಜೆಕ್ಟ್ ಮಾಡಿ' ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾನೆ. ಹೊಸ ನಂಬರ್ ಬಳಸಿದರೆ ಅದನ್ನು ಕೂಡ ಲೀಕ್ ಮಾಡುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.
ನಟಿಯ ಅಭಿಮಾನಿಗಳು ಅಕೌಂಟ್ ಬಗ್ಗೆ ಕೂಡಲೇ ರಿಪೋರ್ಟ್ ಮಾಡಿದ್ದಾರೆ. ಆ ಬಳಿಕದಿಂದ ಆತನ ಅಕೌಂಟ್ ಸ್ಥಗಿತಗೊಂಡಿದೆ. ಕೆಲವೇ ಕ್ಷಣವಿದ್ದ ನಟಿಯ ನಂಬರ್ ಪೋಸ್ಟ್ ಮಾತ್ರ ವೈರಲ್ ಆಗಿದೆ. ಆದರೆ ನಟಿ ಅದಾ ಶರ್ಮಾ ಈ ಬಗ್ಗೆ ಇನ್ನು ಯಾವ ಪ್ರತಿಕ್ರಿಯೆ ನೀಡಿಲ್ಲ.