ಬೆಂಗಳೂರು: ದೂರು ನೀಡಲೆಂದು ಠಾಣೆಗೆ ಬಂದಿರುವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಸ್ವಾಮಿಯ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತೆಯು ಸರಣಿ ಟ್ವೀಟ್ ಮಾಡಿ ಅಳಲು ತೋಡಿಕೊಂಡಿದ್ದಾರೆ.
ವರದಕ್ಷಿಣೆ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯ ಹೇಳಿಕೆ ಪಡೆಯುವ ನೆಪದಲ್ಲಿ ಮಹಿಳೆಯೊಂದಿಗೆ ಎಸ್ಐ ಮಂಜುನಾಥ ಸ್ವಾಮಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಎಪ್ರಿಲ್ 8ರಂದು ನಡೆದಿದೆ. ಈತ ಠಾಣೆಯಲ್ಲಿ ಮಾತ್ರವಲ್ಲದೆ, ವಾಟ್ಸ್ಆ್ಯಪ್ ಸಂದೇಶದ ಮೂಲಕವೂ ಅಸಭ್ಯವಾಗಿ ವರ್ತಿಸಿದ್ದಾನೆ. ಮನೆಗೆ ಹೋದ ಬಳಿಕವು ಕರೆ ಮಾಡಿ 'ನಿಮ್ಮ ಪೋಟೊಗಳನ್ನು ಕಳುಹಿಸಿ' ಎಂದಿದ್ದಾರೆಂದು ಸರಣಿ ಟ್ವಿಟ್ ಮೂಲಕ ಸಬ್ ಇನ್ಸ್‌ಪೆಕ್ಟರ್ ಕೃತ್ಯದ ಬಗ್ಗೆ ಮಹಿಳೆ ವಿವರಣೆ ನೀಡಿದ್ದು, ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ನನ್ನ ಸ್ನೇಹಿತನ ಸಹೋದರನಿಗಾಗಿ ವಿಚ್ಛೇದನ ಪ್ರಕರಣಕ್ಕೆ ಸಾಕ್ಷಿ ಹೇಳಿಕೆ ನೀಡಲು ನಾನು ಪೊಲೀಸ್ ಠಾಣೆಗೆ ಹೋಗಿದ್ದೆ. ಅಲ್ಲಿ ನಾನು ಹೇಳಿಕೆ ನೀಡಲು ಸಬ್ ಇನ್ಸ್‌ಪೆಕ್ಟರ್ ರೊಂದಿಗೆ ಮಾತನಾಡಬೇಕಿತ್ತು. ಆರಂಭದಲ್ಲಿ ಆತ ತುಂಬಾ ಸ್ನೇಹಪರನಾಗಿದ್ದರು. ಆದರೆ, ಬಳಿಕ ಆತನ ನಿಜ ಬಣ್ಣ ಹೊರಬೀಳಲಾರಂಭಿಸಿದೆ. ಪರಿಸ್ಥಿತಿ ತುಂಬಾ ಅಹಿತಕರವಾಗಲು ಪ್ರಾರಂಭಿಸಿತು. ನನ್ನೊಂದಿಗೆ ಚೆಲ್ಲಾಟವಾಡಲು ಪ್ರಾರಂಭಿಸಿದ. ವಿಚಾರಣೆ ಸಮಯದಲ್ಲಿ ನನ್ನ ಕೈಹಿಡಿದು ಮುದ್ದಿಸಲು ಪ್ರಾರಂಭಿಸಿದ. ನಾನು ಭಯಭೀತಳಾದೆ. ಮೊದಲು ನನ್ನ ಹೇಳಿಕೆಯನ್ನು ಪೂರ್ಣಗೊಳಿಸೋಣವೆಂದು ಭಯದಿಂದ ಸುಮ್ಮನಾದೆ. ನನ್ನ ಹೇಳಿಕೆ ನೀಡಿದ ಬಳಿಕ ಆತ ತನ್ನ ಮೊಬೈಲ್ ನಂಬರ್ ನೀಡಿ ಕರೆ ಮಾಡಲು ಕೇಳಿದರು.
ಆ ವೇಳೆ ಬೇರೊಬ್ಬರಿಂದ ಕರೆ ಬಂದಿದ್ದರಿಂದ ಆತ ತನ್ನ ಕ್ಯಾಬಿನ್ ನಿಂದ ಕೆಲಕ್ಷಣ ಹೊರಗೆ ಹೋಗಬೇಕಾಯಿತು. ಈ ವೇಳೆ ಕ್ಯಾಬಿನ್‌ನಿಂದ ಹೊರಡುವಾಗ ಆತ ನನ್ನ ಸೊಂಟವನ್ನು ಹಿಡಿದು ನನ್ನ ನಿತಂಬವನ್ನು ಮುಟ್ಟಿದರು. ಇದರಿಂದ ನಾನು ಆಘಾತಕ್ಕೆ ಒಳಗಾದೆ. ಅಸಹ್ಯವೆನಿಸಿತು, ನಾನು ಅಸಹಾಯಕಳಾಗಿದ್ದೆ. ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ನಾನು ಕುಳಿತಿದ್ದ ಕ್ಯಾಬಿನ್‌ನ ಪಕ್ಕದಲ್ಲಿದ್ದ ಇನ್‌ಸ್ಪೆಕ್ಟರ್ ಕ್ಯಾಬಿನ್‌ಗೆ ಹೋಗಬೇಕೆಂದು ಬಯಸಿದೆ. ಆದರೆ ನಾನು ಜಡವಾಗಿದ್ದೆ. ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಅದೃಷ್ಟವಶಾತ್, ನನ್ನ ತಾಯಿ ನನಗೆ ಸರಿಯಾದ ಸಮಯಕ್ಕೆ ಕರೆ ಮಾಡಿದರು ಮತ್ತು ನಾನು ಅವರ ಕರೆಯನ್ನು ಸ್ವೀಕರಿಸಿ ಹೊರಡಲು ಮುಂದಾದೆ.
ಆತ ಕರೆ ಮಾಡಿದಾಗ ಮತ್ತೆ ಬರುವಂತೆ ನನ್ನನ್ನು ಕೇಳಿದರು. ನಾನು ಮನೆಗೆ ಬಂದ ನಂತರ ನನ್ನ ಫೋಟೋಗಳನ್ನು ಕಳುಹಿಸಲು ಒತ್ತಾಯಿಸಿದರು. ಅಲ್ಲದೆ, ವಾಟ್ಸ್ಆ್ಯಪ್ ಮೂಲಕ ತಡರಾತ್ರಿ ಸಂಭಾಷಣೆಯನ್ನು ಪ್ರಾರಂಭಿಸಿದರು. ನಾನದನ್ನು ನಿರ್ಲಕ್ಷಿಸುವುದನ್ನು ಮುಂದುವರೆಸಿದೆ.
ನಾನು ಪೊಲೀಸ್ ಸ್ಟೇಷನ್‌ನಲ್ಲಿ ಇದ್ದಿದ್ದರಿಂದ, ಅದರ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಏಕೆಂದರೆ ನನಗೆ ತುಂಬಾ ಭಯವಾಗಿತ್ತು. ನಾನು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೇನೆ ಮತ್ತು ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿಲ್ಲ. ನಾನು ಡಿವೋರ್ಸ್ ಪ್ರಕರಣವನ್ನು ಅನುಸರಿಸುವುದನ್ನು ಮುಂದುವರಿಸಬೇಕಾಗಿದೆ ಆದರೆ, ನಾನು ಭಯಭೀತಳಾಗಿದ್ದೇನೆ. ದಯವಿಟ್ಟು ಸಲಹೆ ನೀಡಿ ಎಂದು ಮಹಿಳೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಮಹಿಳೆಯ ಟ್ವಿಟ್ ದೂರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು ಮಾಹಿತಿಯನ್ನು ಕೇಳಿದ್ದಾರೆ.