ಮೋದಿಯವರ ಡಿಗ್ರಿ ಸರ್ಟಿಫಿಕೇಟ್: ಮತ್ತೆ ಪ್ರಶ್ನೆ ಎತ್ತಿದ ಆಮ್ ಆದ್ಮಿ ಪಕ್ಷ
ಮೋದಿಯವರ ಡಿಗ್ರಿ ಸರ್ಟಿಫಿಕೇಟ್: ಮತ್ತೆ ಪ್ರಶ್ನೆ ಎತ್ತಿದ ಆಮ್ ಆದ್ಮಿ ಪಕ್ಷ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿಯ ಸತ್ಯಾಸತ್ಯತೆಯ ಕುರಿತು ಆಮ್ ಆದ್ಮಿ ಪಕ್ಷ ಮತ್ತೆ ಪ್ರಶ್ನೆ ಎತ್ತಿದೆ. ಮೋದಿ ಅವರ ಡಿಗ್ರಿ ಪಡೆದಿರುವುದರ ತನಿಖೆ ನಡೆಸಿದರೆ, ಅವರು ಪದವಿ ಪಡೆದಿರುವುದು ಸುಳ್ಳು ಎಂದು ಸಾಬೀತಾಗುತ್ತದೆ ಎಂದು ಪಕ್ಷ ಹೇಳಿದೆ.
ಮೋದಿ ಅವರು ದೇಶದ ಎದುರು ಸತ್ಯ ಬಿಚ್ಚಿಡಬೇಕು. ಅವರ ಪದವಿ ಪ್ರಮಾಣ ಪತ್ರ ನಕಲಿ ಎಂದು ಸಾಬೀತಾದರೆ, ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಅವರು ಲೋಕಸಭಾ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸಲು ಅವರು ಅನರ್ಹರಾಗುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ.
ಸರ್ಕಾರದ ಎಲ್ಲ ಸಚಿವರು ಮತ್ತು ಬಿಜೆಪಿ ವಕ್ತಾರರು ಪ್ರಧಾನಿ ಮೋದಿಯವರು ಪಡೆದಿರುವ ಪದವಿ ಪ್ರಮಾಣಪತ್ರವು ನಕಲಿಯಲ್ಲ ಎಂದು ಸಾಬೀತುಪಡಿಸಲು ಪ್ರಯಾಸಪಡುತ್ತಿದ್ದಾರೆ. ತನಿಖೆ ನಡೆಸಿದರೆ ಅದು ನಕಲಿ ಎಂದು ಸಾಬೀತಾಗುತ್ತದೆ. ಇದರಿಂದ ಅವರ ಸಂಸತ್ ಸದಸ್ಯತ್ವ ರದ್ದಾಗುತ್ತದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ದೆಹಲಿ ಸರ್ಕಾರದ ಭ್ರಷ್ಟಾಚಾರಗಳನ್ನು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವುದರಿಂದ ಆಮ್ ಆದ್ಮಿ ಆತಂಕಕ್ಕೊಳಗಾಗಿದೆ. ಇದರಿಂದ ಆಮ್ ಆದ್ಮಿ ಪಕ್ಷ ಮೋದಿಯವರ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿದೆ ಎಂದು ಟೀಕಿಸಿದೆ.