-->
1000938341
ನೂರಕ್ಕೂ ಅಧಿಕ ವಿವಾಹವಾದ ಭೂಪ: ಈತನಿಗೆ ಜಗತ್ತಿನಾದ್ಯಂತ ಮಡದಿಯರು

ನೂರಕ್ಕೂ ಅಧಿಕ ವಿವಾಹವಾದ ಭೂಪ: ಈತನಿಗೆ ಜಗತ್ತಿನಾದ್ಯಂತ ಮಡದಿಯರು


ನವದೆಹಲಿ: ಮನೆಯಲ್ಲಿ ಓರ್ವಳು ಹೊರಗೋರ್ವಳು ಎಂಬಂತೆ ಇಬ್ಬಿಬ್ಬರು ಹೆಂಡತಿಯರನ್ನು ಹೊಂದಿ ಪೀಕಲಾಟಕ್ಕೆ ಸಿಲುಕಿ ಒದ್ದಾಡುವವರ ಕಥೆಯನ್ನು ನಾವು ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬನ ಸಂಸಾರವೆಂದರೆ ಯಾರಿಗೂ ಊಹಿಸಲಸಾಧ್ಯ. ಈತ ಮದುವೆಯಾದದ್ದು ಒಬ್ಬಿಬ್ಬರನಲ್ಲಾ. ಈತನಿಗೆ ಜಗತ್ತಿನಾದ್ಯಂತ ಬರೋಬ್ಬರಿ 104 ಪತ್ನಿಯರಿದ್ದಾರೆ.

ಹೌದು... ಜಿಯೊವನ್ನಿ ವಿಗ್ಲಿಯೊಟೊ ಎಂಬಾತ 33 ವರ್ಷಗಳಲ್ಲಿ ಯಾರಿಗೂ ವಿಚ್ಛೇದನ ನೀಡದೆ ಒಟ್ಟು 104 ವಿವಾಹವಾಗಿದ್ದಾನೆ. ಯುಎಸ್‌ನ 27 ರಾಜ್ಯಗಳಲ್ಲಿ ಮಾತ್ರವಲ್ಲದೆ, ಜಗತ್ತಿನ ಇತರ 14 ದೇಶಗಳಲ್ಲಿನ ಮಹಿಳೆಯರನ್ನು ಈತ ವಿವಾಹವಾಗಿದ್ದಾನೆ. ವಿಶೇಷವೆಂದರೆ ಅತಿಹೆಚ್ಚು ವಿವಾಹಗಿರುವ ವಿಶ್ವದಾಖಲೆಗೂ ಪಾತ್ರನಾಗಿರುವ ಈತನ ಅಸಲಿ ಹೆಸರು ಬಹಳ ಕಾಲ ಯಾರಿಗೂ ತಿಳಿದಿರಲಿಲ್ಲ ಎನ್ನಲಾಗಿದೆ.

ತನ್ನ ಗುರುತನ್ನು ಮರೆಮಾಡಿ ಮಹಿಳೆಯರನ್ನು ಮರುಳು ಮಾಡಿ ಮದುವೆಯಾಗುವ ಈತ 'ನಾನು ದೂರದಲ್ಲಿ ನೆಲೆಸಿರುವುದರಿಂದ ನೀನು ಎಲ್ಲ ಗಂಟುಮೂಟೆ ಕಟ್ಟಿಕೊಂಡು ಬಾ' ಎಂದು ಹೇಳುತ್ತಿದ್ದ. ಆಕೆ ತಂದ ವಸ್ತುಗಳನ್ನು ಪ್ಯಾಕೇಜ್ ಲಾರಿಗೆ ಹಾಕಿಸಿ ಪರಾರಿಯಾಗುವ ಬಳಿಕ ಈತ ಆಕೆಯ ಸಿಗುತ್ತಿರಲಿಲ್ಲ. ಬಳಿಕ ಈತ ಆ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರುತ್ತಿದ್ದ. ಬೇರೆ ಪುರುಷರಿಗಿಂತ ಭಿನ್ನವಾಗಿ ಈತ ಮಹಿಳೆಯರೊಂದಿಗೆ ವರ್ತಿಸುತ್ತಿದ್ದುದರಿಂದ ಅವರು ಈತನಿಗೆ ಮರುಳಾಗುತ್ತಿದ್ದರು ಎನ್ನಲಾಗಿದೆ. ಅಲ್ಲದೆ ತನಗೆ ಶಿಕ್ಷೆಯಾದ ವೇಳೆ ಇವನು ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಟ್ಟಿಲ್ಲ ಎಂದೂ ವರದಿಯಾಗಿದೆ.

ಮದುವೆಯಾಗಿ ವಂಚಿಸಿದ್ದ ಪ್ರಕರಣಗಳಲ್ಲಿ ಈತನಿಗೆ ಒಟ್ಟು 34 ವರ್ಷದವರೆಗೆ ಶಿಕ್ಷೆಯಾಗಿತ್ತು. ಅಲ್ಲದೆ 3,36,000 ಡಾಲರ್ ದಂಡ ವಿಧಿಸಲಾಗಿತ್ತು. ಅರಿಜೋನಾ ಸ್ಟೇಟ್ ಜೈಲಿನಲ್ಲಿ 8 ವರ್ಷದ ಶಿಕ್ಷೆ ಮುಗಿಯುವಷ್ಟರಲ್ಲಿ ಈತ ಬ್ರೇನ್ ಹ್ಯಾಮರೇಜ್‌ಗೆ ತುತ್ತಾಗಿ ಮೃತಪಟ್ಟಿದ್ದ. 1991ರಲ್ಲಿ ಸಾವಿಗೀಡಾಗಿದ್ದ ಈತನ ಕುರಿತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇತ್ತೀಚೆಗೆ ಟ್ವಿಟ್ ಮಾಡಿದ್ದರಿಂದ ಮತ್ತೆ ಈತನ ವಿಚಾರ ಮುನ್ನೆಲೆಗೆ ಬಂದಿದ್ದು, ಎಲ್ಲೆಡೆ ಸುದ್ದಿ ಆಗಲಾರಂಭಿಸಿದೆ.

Ads on article

Advertise in articles 1

advertising articles 2

Advertise under the article