ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿದೆ ಮಾವಿನಹಣ್ಣು: ರೈತರಿಂದ ನೇರ ಖರೀದಿಯ ಮೂಲಕ ತಾಜಾ ಹಣ್ಣು ಲಭ್ಯ
Thursday, April 6, 2023
ಬೆಂಗಳೂರು: ಈಗ ಮಾವು ಸೀಝನ್. ಆದರೆ ಕೈಗೆಟಕುವ ದರದಲ್ಲಿ ಎಲ್ಲೂ ಮಾವು ಲಭ್ಯವಿಲ್ಲ. ಆದರೆ ಇದೀಗ ಮಾವು ರೈತರಿಂದ ನೇರ ಖರೀದಿಯ ಮೂಲಕ ಸುಲಭವಾಗಿ ಮನೆ ಬಾಗಿಲಿಗೆ ಬರುವ ವ್ಯವಸ್ಥೆಯೊಂದು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ.
ಹೌದು.. ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ರಸಭರಿತ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಪೂರೈಸುವ ವ್ಯವಸ್ಥೆಗೆ ಅಂಚೆ ಇಲಾಖೆ ಬುಧವಾರ ಚಾಲನೆ ನೀಡಿದೆ.
ಮಹಾನಗರದ ಯಾವುದೇ ಭಾಗದ ಗ್ರಾಹಕರು ಆನ್‌ಲೈನ್ ( https://www.kolarmangoes.com ) ನಲ್ಲಿ ಆರ್ಡರ್ ಮಾಡಿದರೆ ಒಂದೇ ದಿನದಲ್ಲಿ ಪೂರೈಕೆ ಮಾಡಲಾಗುತ್ತದೆ. ಇದಕ್ಕಾಗಿ ಕೋಲಾರ ಜಿಲ್ಲೆಯ ರೈತರು 'ನಮ್ಮ ತೋಟ' ವೇದಿಕೆಯನ್ನು ರಚಿಸಿಕೊಂಡಿದ್ದಾರೆ. ಆರ್ಡರ್ ಬುಕ್ ಮಾಡಲು ಕನಿಷ್ಠ ಒಂದು ಬಾಕ್ಸ್ (3 ಕೆ.ಜಿ. ಮಾವು) ಖರೀದಿಸಬೇಕಾಗುತ್ತದೆ. ಬಾದಾಮಿ, ರಸಪೂರಿ, ಆಲ್ಫೋನ್ಸಾ ತಳಿಯ ಮಾವನ್ನು ತಾಜಾ ರೂಪದಲ್ಲಿ ತಲುಪಿಸಲಾಗುತ್ತದೆ. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಇದಾಗಿರುವ ಕಾರಣ ತಿನ್ನಲು ರುಚಿಯಾಗಿತ್ತವೆ. ರೈತರು ತಮ್ಮ ತೋಟದಲ್ಲಿ ಬೆಳೆದಿರುವ ಮಾವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಪೂರೈಸಲು ಅಂಚೆ ಇಲಾಖೆ ಸಹಯೋಗ ಪಡೆದಿದೆ. ಇದಕ್ಕೆ ಮಾವು ಅಭಿವೃದ್ಧಿ ಮಂಡಳಿಯ ಸಹಕಾರವೂ ಇದೆ ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಕಾಲದಲ್ಲಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದರಿಂದ ಆನ್‌ಲೈನ್ ಮೂಲಕ ಮೊದಲ ಬಾರಿಗೆ ಮಾವಿನಹಣ್ಣನ್ನು ಅಂಚೆ ಇಲಾಖೆ ಮೂಲಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ 100 ಟನ್ ಮಾವು ಬಿಕರಿಯಾಗಿತ್ತು. ನಂತರದ ವರ್ಷದಲ್ಲಿ 90 ಟನ್ ಮಾರಾಟವಾಗಿತ್ತು. ಕಳೆದ ಸಾಲಿನಲ್ಲಿ ಅಂದಾಜು 75 ಟನ್ ಮಾರಾಟವಾಗಿದ್ದು, ಈ ಬಾರಿ 100 ಟನ್‌ಗಿಂತ ಹೆಚ್ಚು ಮಾವು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಮಾವು ಖರೀದಿಸಲು ಹೆಚ್ಚಿನ ಮಾಹಿತಿಗೆ ಮೊ: 9886116046 ಸಂಪರ್ಕಿಸಬಹುದು.