ಮಂಗಳೂರು: ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಗೆ ನೀಡಿದ್ದ ಪೊಲೀಸ್ ಭದ್ರತೆ ವಾಪಸ್


ಮಂಗಳೂರು: ವಿಚಾರವಾದಿ, ಸಾಮಾಜಿಕ ಹೋರಾಟಗಾರ, ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್‌ ಅವರಿಗೆ ಕಳೆದ ಏಳು ವರ್ಷಗಳಿಂದ ನೀಡಿದ್ದ ಗನ್ ಮ್ಯಾನ್ ಅನ್ನು ಪೊಲೀಸ್ ಇಲಾಖೆ ವಾಪಸ್ ಪಡೆದಿದೆ ಎಂದು ತಿಳಿದು ಬಂದಿದೆ.

ಹಲವಾರು ಜನಪರ ಹೋರಾಟದಲ್ಲಿ ನರೇಂದ್ರ ನಾಯಕ್‌ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಪರಿಣಾಮ ಅವರಿಗೆ ಬೆದರಿಕೆ ಕರೆಗಳು ಬರತೊಡಗಿತ್ತು.‌ ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಏಳು ವರ್ಷಗಳ ಹಿಂದೆ ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಇಬ್ಬರು ಅಂಗರಕ್ಷಕರ ಮೂಲಕ ಪೊಲೀಸ್ 'ಭದ್ರತೆ'ಯನ್ನು ಒದಗಿಸಿದ್ದರು. ಹಗಲು - ರಾತ್ರಿ ಪಾಳಿಯಲ್ಲಿ ರಕ್ಷಣೆ ಇವರು ನೀಡುತ್ತಿದ್ದರು. ಆದರೆ ಈ ಭದ್ರತಾ ಸಿಬ್ಬಂದಿ ಬುಧವಾರ ರಾತ್ರಿಯಿಂದ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಈ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳು ಅಂಗರಕ್ಷಕರನ್ನು ವಾಪಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.


ಡಿಸಿಪಿ ಅಂಶುಕುಮಾರ್ ಅವರು ಅಂಗರಕ್ಷಕರ ಮುಂಗಡ ಶುಲ್ಕವನ್ನು ಪಾವತಿಸಲು ನರೇಂದ್ರ ನಾಯಕ್‌ ಅವರಿಗೆ ಮಾ.4ರಂದು ಪತ್ರ ಮುಖೇನ ಸೂಚಿಸಿದ್ದರು. ಈ ಬಗ್ಗೆ ಚರ್ಚಿಸಲು ಮಾ.6ರಿಂದ 10ರೊಳಗೆ ಕಚೇರಿ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರು. ಅದರಂತೆ ನರೇಂದ್ರ ನಾಯಕ್ ಮಾ.7ರಂದು ಡಿಸಿಪಿ ಅಂಶುಕುಮಾರ್‌ರನ್ನು ಭೇಟಿ ಮಾಡಿ 'ಮುಂಗಡ ಶುಲ್ಕ ಪಾವತಿಸಲು ಸಾಧ್ಯವಿಲ್ಲ' ಎಂದಿದ್ದಾರೆ. ಆದರೆ ಇದೀಗ ಮಾ.29ರ ರಾತ್ರಿಯಿಂದ ನರೇಂದ್ರ ನಾಯಕ್‌ಗೆ ನೀಡಲಾದ ಅಂಗರಕ್ಷಕರನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ನರೇಂದ್ರ ನಾಯಕ್ ಮಾತನಾಡಿ, 'ತಾನೊಬ್ಬ ಸಾಮಾಜಿಕ ಹೋರಾಟಗಾರ, ವಿಚಾರವಾದಿ. ನನಗೀಗ 73 ವಯಸ್ಸು. ಈಗಲೂ ಅನೇಕ ಜನಪರ ಸಂಘಟನೆಗಳ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ಆ ಹಿನ್ನೆಲೆಯಲ್ಲಿ ನನ್ನ ಮೇಲೆ ಹಲ್ಲೆ, ಕೊಲೆಯತ್ನ ನಡೆದಿದೆ. ಆದರೆ ನಾನು ಯಾವತ್ತೂ ಪೊಲೀಸ್ ರಕ್ಷಣೆಯನ್ನು ಕೇಳಿರಲಿಲ್ಲ. 2016ರಲ್ಲಿ ಆಗಿನ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ತನಗೆ ಭದ್ರತೆಯನ್ನು ಒದಗಿಸಿದ್ದರು. ಮೊನ್ನೆ ಮುಂಗಡ ಶುಲ್ಕ ಭರಿಸಿ ಭದ್ರತೆ ಮುಂದುವರಿಸಲು ಸೂಚನೆ ಬಂದಿತ್ತು. ''ನಾನು ಉದ್ಯಮಿಯಲ್ಲ. ಹಾಗಾಗಿ ಶುಲ್ಕ ಭರಿಸಲು ಸಾಧ್ಯವಿಲ್ಲ" ಅಂತ ಹೇಳಿದ್ದೆ. ನಿನ್ನೆ ರಾತ್ರಿಯಿಂದ ಭದ್ರತೆ ವಾಪಸ್ ಪಡೆಯಲಾಗಿದೆ. ಆದರೆ ಕಾರಣವೇನೆಂಬುದು ಇನ್ನೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.