ಹೃದಯಾಘಾತದಿಂದ ಮೃತಪಟ್ಟ ಮಹಿಳೆಯ ಕೈಯಲ್ಲಿದ್ದ ಚಿನ್ನದ ಬಳೆ ನಾಪತ್ತೆ: ಹಾಗಾದರೆ ಆದದ್ದಾದರೂ ಏನು?
Wednesday, March 1, 2023
ಥಾಣೆ: ಹೃದಯಾಘಾತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರೂ ಆ್ಯಂಬುಲೆನ್ಸ್ ನಲ್ಲಿ ಆಕೆಯ ಮೈಮೇಲಿದ್ದ ಎರಡು ಚಿನ್ನದ ಬಳೆಗಳನ್ನು ಕಳವಾಗಿರುವ ಪ್ರಕರಣವೊಂದು ಮಹಾರಾಷ್ಟ್ರದ ಥಾಣೆಯ ಮೀರಾ ಭಯಂದರ್‌ನಲ್ಲಿ ನಡೆದಿದೆ. ಈ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಜೆಹುಬಿ ಶೇಖ್(85) ಎಂಬಾಕೆ ಹೃದಯಾಘಾತಕ್ಕೀಡಾಗಿ ಮೃತಪಟ್ಟವರು. ಇವರಿಗೆ ಹೃದಯಾಘಾತವಾದ ತಕ್ಷಣಪುತ್ರ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಜೆಹುಬಿ ಶೇಖ್ ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರ ಮೃತದೇಹವನ್ನು ಮನೆಗೆ ತರಲಾಗಿತ್ತು. ಆದರೆ ಮನೆಯಲ್ಲಿ ನೋಡಿದಾಗ ಅವದ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳು ನಾಪತ್ತೆಯಾಗಿತ್ತು.
ತಾಯಿಯ ಕೈಯಲ್ಲಿದ್ದ 28 ಸಾವಿರ ರೂ. ಮೌಲ್ಯದ 2 ಬಳೆಗಳು ಕಾಣೆಯಾಗಿವೆ ಎಂದು ಅವರ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಆ್ಯಂಬುಲೆನ್ಸ್ ಸಿಬ್ಬಂದಿಯೇ ಕದ್ದಿರುವುದು ಎಂಬುದು ತಿಳಿದು ಬಂದಿದೆ. ಆತ ಬಳೆಯನ್ನು ವಿರಾರ್‌ನ ಒಂದು ಅಂಗಡಿಯಲ್ಲಿ ಮಾರಿದ್ದು ಪೊಲೀಸರು ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.