ಪಟ್ನಾ: ಹೋಮ್‌ವರ್ಕ್ ಮಾಡಲಿಲ್ಲವೆಂದು ಶಿಕ್ಷಕನೋರ್ವನು ನಡೆಸಿರುವ ಅಮಾನುಷ ಹಲ್ಲೆಯಿಂದ 7 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ಬಿಹಾರದ ಸಹರ್ಸ ಜಿಲ್ಲೆಯಲ್ಲಿ ನಡೆದಿದೆ.
ಮಾಧೇಪುರ್ ಜಿಲ್ಲೆಯ ಭಾರಾಹಿ ಗ್ರಾಮದ ನಿವಾಸಿ ಆದಿತ್ಯ ಕುಮಾರ್(7) ಮೃತಪಟ್ಟ ಬಾಲಕ.
ಈತ ಸಹರ್ಸ ಜಿಲ್ಲೆಯ ಖಾಸಗಿ ಶಾಲೆಯ ಹಾಸ್ಟೆಲ್ ನಲ್ಲಿ ವಾಸವಿದ್ದ. ಈತ ಹೋಮ್ ವರ್ಕ್ ಮಾಡಿಲ್ಲವೆಂದು ಶಿಕ್ಷಕನೋರ್ವನು ಅಮಾನುಷವಾಗಿ ಥಳಿಸಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಆತ ಮೃತಪಟ್ಟಿದ್ದಾನೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ ಪ್ರಕಾಶ್ ''ಮಾರ್ಚ್ 14ರಂದು ನಮ್ಮ ಪುತ್ರ ಆದಿತ್ಯನನ್ನು ಶಾಲೆಗೆ ಕಳುಹಿಸಿದ್ದೆವು. ಶುಕ್ರವಾರ ಶಾಲಾ ಆಡಳಿತ ಮಂಡಳಿಯವರು ಕರೆ ಮಾಡಿ ಆದಿತ್ಯ ಪ್ರಜ್ಞೆ ತಪ್ಪಿರುವುದಾಗಿ ತಿಳಿಸಿದ್ದರು. ತಕ್ಷಣ ನಾವು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವು. ಆದರೆ, ಅಲ್ಲಿ ವೈದ್ಯರು ಆದಿತ್ಯ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಬಾಲಕ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಶಿಕ್ಷಕ ತಲೆಮಾರಿಸಿಕೊಂಡಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಘಟನೆ ಸಂಬಂಧ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣಾಧಿಕಾರಿ ಬ್ರಜೇಶ್ ಚೌಹಾಣ್ ತಿಳಿಸಿದ್ದಾರೆ.