-->

ಪತ್ನಿ ಮನೆಗೆ ಹೋಗಿದ್ದ ಪತಿ ನಿಗೂಢ ಸಾವು: ಪತ್ನಿ ಕುಟುಂಬಸ್ಥರ ಮೇಲೆ ಕೊಲೆ ಆರೋಪ

ಪತ್ನಿ ಮನೆಗೆ ಹೋಗಿದ್ದ ಪತಿ ನಿಗೂಢ ಸಾವು: ಪತ್ನಿ ಕುಟುಂಬಸ್ಥರ ಮೇಲೆ ಕೊಲೆ ಆರೋಪ


ಬೆಂಗಳೂರು: ಪತ್ನಿ ಮನೆಗೆಂದು ಹೋಗಿದ್ದ ಯುವಕನೋರ್ವನು ನಿಗೂಢವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ವೈಯಾಲಿ ಕಾವಲ್‌ನಲ್ಲಿ ನಡೆದಿದ್ದು, ಮೃತನ ಕುಟುಂಬಸ್ಥರು ಪತ್ನಿಯ ಕುಟುಂಬಸ್ಥರೇ ವಿಷಪ್ರಾಶಣ ಮಾಡಿ ಕೊಲೆಗೈದಿದ್ದಾರೆಂದು ದೂರು ದಾಖಲಿಸಿದ್ದಾರೆ.

ವಿನೋದ್ ಕುಮಾರ್ ಮೃತಪಟ್ಟ ವ್ಯಕ್ತಿ. ವಿನೋದ್ ಕುಮಾರ್ ಹಾಗೂ ನಿರ್ಮಲಾಗೆ 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಕಳೆದ ಎರಡು ತಿಂಗಳಿನಿಂದ ದಂಪತಿ ನಡುವೆ ಕಲಹ ಆರಂಭವಾಗಿತ್ತು. ಆದ್ದರಿಂದ ನಿರ್ಮಲಾ, ಪತಿಯನ್ನು ಮನೆಬಿಟ್ಟು ಓಡಿಸಿದ್ದಳು. ಆದ್ದರಿಂದ ವಿನೋದ್ ಕುಮಾರ್ ವೈಯಾಲಿಕಾವಲ್‌ನಿಂದ ಕೆ.ಆರ್.ಪುರಂನಲ್ಲಿರುವ ತಾಯಿ ಮನೆಯಲ್ಲಿ ಬಂದು ನೆಲೆಸಿದ್ದ.

ಆದರೆ 15 ದಿನಗಳ ಹಿಂದೆ ನಿರ್ಮಲಾಗೆ ಅಪಘಾತವಾಗಿದೆ ಎಂಬ ವಿಚಾರ ವಿನೋದ್ ಕಿವಿಗೆ ಬಿದ್ದಿದೆ. ತಕ್ಷಣ ಆತ ಪತ್ನಿಯನ್ನು ನೋಡಲು ಹೋಗಿದ್ದ. ಅಲ್ಲದೆ, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಸಹ ಕೊಡಿಸಿದ್ದ. ನಿರ್ಮಲಾ ಕಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಸತ್ಯನಾರಾಯಣ ಪೂಜೆಗೆ ಅಂತಾ ಹೋಗಿದ್ದೆ, ಈ ವೇಳೆ ಸದಾಶಿವನಗರದಲ್ಲಿ ಆಟೋ ಚಾಲಕ ಡಿಕ್ಕಿ ಹೊಡೆದ ಹೊರಟುಹೋದ ಎಂದಿದ್ದಳು. ಆದರೆ ಅದರ ಅಸಲಿಯತ್ತೇ ಬೇರೆ ಎಂಬುದು ವಿನೋದ್ ಕುಟುಂಬಸ್ಥರ ಆರೋಪ.

ನಿರ್ಮಲಾಗೆ ಕಿರಣ್ ಎಂಬಾತನೊಂದಿಗೆ ಲವ್ವೀಡವ್ವೀ ಇತ್ತು. ನಿರ್ಮಲಾ ಪ್ರಿಯಕರನಿಗೂ ವಿವಾಹವಾಗಿದ್ದು ಪತ್ನಿ ಇದ್ದಾಳೆ. ಅದಾಗಿಯೂ ಇಬ್ಬರು ವಿವಾಹೇತರ ಸಂಬಂಧವನ್ನು ಹೊಂದಿದ್ದರು. ನಿರ್ಮಲಾ ಬೈಕ್ ನಲ್ಲಿ ಪ್ರಿಯಕರನೊಂದಿಗೆ ನಂದಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದ ವೇಳೆ ನಿರ್ಮಲಾ ಬೈಕ್ ಓಡಿಸಿಕೊಂಡು ಬಂದು ಟಿಪ್ಪರ್‌ಗೆ ಗುದ್ದಿದ್ದಾಳೆ ಎಂದು ವಿನೋದ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಈ ವಿಚಾರ ಐದು ದಿನಗಳ ಹಿಂದೆ ವಿನೋದ್ ಗೆ ಗೊತ್ತಾಗಿದೆ. ಇದನ್ನು ಪ್ರಶ್ನಿಸಲು ವಿನೋದ್ ಮನೆಗೆ ತೆರಳಿದ್ದ. ನಂತರ ಫೆ.16ಕ್ಕೆ ಅಕ್ಕ ಪ್ರಮೀಳಾ ಮನೆಗೆ ವಿನೋದ್ ಬಂದಿದ್ದ. ಎಲ್ಲ ವಿಚಾರವನ್ನು ಪ್ರಮೀಳಾಗೆ ಹೇಳಿದ್ದ. ಇದೆಲ್ಲ ಬಿಟ್ಟು ನನ್ನ ಜೊತೆಗೆ ಬಂದುಬಿಡು, ಬೇರೆ ಕಡೆ ಹೋಗಿ ಜೀವನ ಮಾಡೋಣ ಅಂತಾ ನಿರ್ಮಲಾಗೆ ವಿನೋದ್ ಬುದ್ಧಿ ಹೇಳಿದ್ದ. ಇದನ್ನು ಸಹ ಅಕ್ಕನ ಬಳಿಗೆ ಬಂದು ಹೇಳಿಕೊಂಡಿದ್ದ.

ಸೋಮವಾರ ಮತ್ತೆ ಪತ್ನಿಯೊಂದಿಗೆ ಮಾತಾಡಲು ವಿನೋದ್ ಹೋಗಿದ್ದಾನೆ. ಇತ್ತ ವಿನೋದ್ ಕುಟುಂಬಸ್ಥರು ಬೆಳಗ್ಗೆಯಿಂದ ಆತನಿಗೆ ಕರೆ ಮಾಡಿದರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸಂಜೆ ಕರೆ ಸ್ವೀಕರಿಸಿದ್ದ ನಿರ್ಮಲಾ ಕುಟುಂಬಸ್ಥರು ಆ್ಯಸಿಡ್ ಕುಡಿದಿದ್ದಾನೆಂದು ಮಾಹಿತಿ ನೀಡಿದ್ದಾರೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿರುವುದಾಗಿಯು ಮತ್ತು ಚಿಕಿತ್ಸೆ ಫಲಕಾರಿಯಾಗದೇ ವಿನೋದ್ ಮೃತಪಟ್ಟಿರುವುದಾಗಿಯೂ ತಿಳಿಸಿದ್ದಾರೆ.

ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಿನೋದ್ ಕುಟುಂಬಸ್ಥರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ನಿರ್ಮಲಾ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಅವರೇ ವಿಷ ಕುಡಿಸಿ ಕೊಂದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article