ಮಂಜೇಶ್ವರ: ಹುಟ್ಟುಹಬ್ಬದಂದೇ ಮೆಷಿನ್ ಗೆ ಚೂಡಿದಾರ್ ಸಿಲುಕಿ ಉಸಿರುಗಟ್ಟಿ ಗೃಹಿಣಿ ಸಾವು


ಮಂಜೇಶ್ವರ: ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮೆಷಿನ್ ಗೆ ಚೂಡಿದಾರ್ ಶಾಲು ಸಿಲುಕಿಕೊಂಡು ಗೃಹಿಣಿಯೋರ್ವರು ಉಸಿರುಕಟ್ಟಿ ಮೃತಪಟ್ಟ ದಾರುಣ  ಘಟನೆ ಮಂಜೇಶ್ವರದ ತೂಮಿನಾಡು ಎಂಬಲ್ಲಿ ನಡೆದಿದೆ.

ಜಯಶೀಲ(24) ಮೃತಪಟ್ಟ ಯುವತಿ. ಶನಿವಾರ ಅವರ ಹುಟ್ಟುಹಬ್ಬವಾಗಿದ್ದು, ಅದೇ ದಿನವೇ ಅವರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ದುರಂತ ನಡೆದಿದೆ. ಮೆಷಿನ್ ಗೆ  ಚೂಡಿದಾರ್ ಶಾಲು ಸಿಲುಕಿಕೊಂಡು ಅವರ ಕತ್ತು ಬಿಗಿದು ಉಸಿರು ಕಟ್ಟಿದಂತಾಗಿ ಗಂಭೀರ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಜಯಶೀಲ ಅವರಿಗೆ ಒಂದೂವರೆ ವರ್ಷದ ಹಿಂದಷ್ಟೇ ರಂಜನ್ ಎಂಬವರೊಂದಿಗೆ ಮದುವೆಯಾಗಿತ್ತು. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.