ಬೆಳ್ತಂಗಡಿ: ಅಪರಿಚಿತನಿಂದ ವೈಯುಕ್ತಿಕ ವೀಡಿಯೋ ವೈರಲ್ ಬೆದರಿಕೆ; ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆತ್ನಿಸಿದ ಬಿಕಾಂ ವಿದ್ಯಾರ್ಥಿ


ಬೆಳ್ತಂಗಡಿ: ಹಣ ನೀಡದಿದ್ದಲ್ಲಿ ವೈಯುಕ್ತಿಕ ವೀಡಿಯೋ ವೈರಲ್ ಮಾಡುವುದಾಗಿ ಅಪರಿಚಿತ ನೀಡಿರುವ ಬೆದರಿಕೆ ಕರೆಯಿಂದ ಹೆದರಿ ಕಾಲೇಜು ವಿದ್ಯಾರ್ಥಿಯೋರ್ವನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. 

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ನಿವಾಸಿ, ಬೆಳ್ತಂಗಡಿ ಖಾಸಗಿ ಕಾಲೇಜು ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ ಹರ್ಷಿತ್ ಆತ್ಮಹತ್ಯೆಗೆ ಯತ್ನಿಸಿದವನು.

ಹರ್ಷಿತ್ ಗೆ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ಪರಿಚಯವಾಗಿದೆ. ಆತನೊಂದಿಗೆ ಇನ್‌ ಸ್ಟಾಗ್ರಾಂನಲ್ಲಿ ಹರ್ಷಿತ್ ಚಾಟಿಂಗ್‌ ಮಾಡಿಕೊಂಡಿದ್ದರು. ಅಲ್ಲದೆ ವೀಡಿಯೋ ಕರೆಯ ಮೂಲಕವೂ ಮಾತನಾಡುತ್ತಿದ್ದರು. ಆದರೆ ಇತ್ತೀಚೆಗೆ ಅಪರಿಚಿತ ಹರ್ಷಿತ್ ಗೆ ಕರೆ ಮಾಡಿ 'ತನ್ನಲ್ಲಿ ನಿನ್ನ ವೈಯುಕ್ತಿಕ ವೀಡಿಯೋ ಇದೆ. ತನಗೆ 11 ಸಾವಿರ ರೂ. ನೀಡದಿದ್ದಲ್ಲಿ ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ‌.' ಇದರಿಂದ ಬೆದರಿದ ಹರ್ಷಿತ್ ಹಣ ಹೊಂದಿಸಲು ಅವಕಾಶ ಕೇಳಿ, ಅದು ಸಾಧ್ಯವಾಗದೆ, ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದಾರೆ. ಪರಿಣಾಮ ಅಸ್ವಸ್ಥರಾದ ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.