ವಿವಾಹವಾದ ಕೆಲವೇ ವರ್ಷಗಳಲ್ಲಿ ಪುತ್ರನ ಸಾವು: ಸೊಸೆಗೆ ಮರುವಿವಾಹ ಮಾಡಿದ ಮಾಜಿ ಶಾಸಕ


ಭುವನೇಶ್ವರ: ವಿವಾಹವಾದ ಕೆಲವೇ ವರ್ಷಗಳಲ್ಲಿ ಕಾಯಿಲೆಯಿಂದ ಪುತ್ರ ತೀರಿಕೊಂಡ ಹಿನ್ನೆಲೆಯಲ್ಲಿ ಸೊಸೆಗೆ ಬೇರೊಬ್ಬನೊಂದಿಗೆ ಮರುವಿವಾಹ ಮಾಡಿಸುವ ಮೂಲಕ ಒಡಿಶಾದ ಮಾಜಿ ಶಾಸಕರೊಬ್ಬರು ಮಾದರಿಯಾಗಿದ್ದಾರೆ. ಈ ವಿವಾಹಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕರ ನಡೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಒಡಿಶಾದ ಧನಂಕನಲ್ ಜಿಲ್ಲೆಯ ಗಂಡಿಯಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಬಿನ್ ನಂದಾ ಸೊಸೆಗೆ ಮರು ವಿವಾಹ ಮಾಡಿದವರು. ಅವರ ಪುತ್ರ ಸಂಬಿತ್ ಗೆ ಮಧುಸ್ಮಿತಾ ಎಂಬಾಕೆಯೊಂದಿಗೆ ಅದ್ದುರಿಯಾಗಿ ವಿವಾಹ ನೆರವೇರಿಸಿದ್ದರು. ಆದರೆ, ಕೊರೊನಾ ತಗುಲಿದ ಸಂಬಿತ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ 2021ರ ಮೇ 22ರಂದು ತೀರಿಕೊಂಡಿದ್ದರು.

ಸಂಬಿತ್ ಸಾವಿನ ಬಳಿಕ ಸೊಸೆ ಮಧುಸ್ಮಿತಾ  ಒಂಟಿತನವನ್ನು ಸಹಿಸಲಾಗದೆ ಆಕೆಯನ್ನು ಮರು ಮದುವೆಗೆ ನಬಿನ್ ನಂದಾ ಒತ್ತಾಯ ಮಾಡಿದ್ದಾರೆ. ಸೊಸೆ ಹಾಗೂ ಕುಟುಂಬಸ್ಥರಿಗೆ ಮನವರಿಕೆ ಮಾಡಿ ಬಾಲಸೋರ್ ಜಿಲ್ಲೆಯ ಶಿವಚಂದನ್ ಎಂಬ ಯುವಕನೊಂದಿಗೆ ಮರು ವಿವಾಹ ಮಾಡಿಸಿದ್ದಾರೆ. ಮಂಗಳವಾರ ಭುವನೇಶ್ವರದ ನಾಯಪಲ್ಲಿ ಲಕ್ಷ್ಮಿ ದೇವಸ್ಥಾನದಲ್ಲಿ ಸರಳವಾಗಿ ಈ ಮದುವೆ ಕಾರ್ಯಕ್ರಮ ನಡೆದಿದೆ. ಕಾಕತಾಳೀಯವೆಂಬಂತೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದೇ ಈ ವಿವಾಹ ನಡೆದಿದೆ. ನಬಿನ್ ನಂದಾ ಅವರ ಸೊಸೆ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗುತ್ತಿದೆ.

ಈ ದಿನವನ್ನು ನಾನೆಂದು ಮರೆಯಲಾರೆ. ನಾನು ತಪ್ಪು ಮಾಡಿದೆನೋ ಗೊತ್ತಿಲ್ಲ. ಹಿಂದೂ ಆಚಾರ-ವಿಚಾರಗಳಿಗೆ ವಿರುದ್ಧವಾಗಿ ನನ್ನ ಸೊಸೆಯನ್ನು ಮರು ಮದುವೆ ಮಾಡಿಸಿದೆ. ನನ್ನ ಹಿರಿಯ ಪುತ್ರ ಅಗಲಿದ ಬಳಿಕ ಆಕೆಯ ಒಂಟಿತನವನ್ನು ನೋಡಲಾಗದೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಮ್ಮ ಮನೆಗೆ ಸೊಸೆಯಾಗಿ ಬಂದಳು. ಈಗ ಆಕೆ ಓರ್ವ ಹೆಣ್ಣು ಮಗಳಿದ್ದಾಳೆ ಎಂದು ನಬಿನ್ ಹೇಳಿದರು. ನಬಿನ್ ಅವರು ಈ ಹಿಂದೆ ಬಿಜೆಡಿ ಪರವಾಗಿ ಗಾಂಧಿಯಿಂದ ಶಾಸಕರಾಗಿ ಗೆದ್ದಿದ್ದರು. 2019 ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು ಆದರೆ ಗೆಲ್ಲಲು ವಿಫಲವಾದರು.