-->
ಮಂಗಳೂರು: ಸಹಪಾಠಿಗಳ ಆಸರೆಯಲ್ಲಿ ವಿಕಲಚೇತನೆಗೆ ದೊರಕಿತು ಅಕ್ಷರದ ಅಕ್ಕರೆ; ಈಕೆಯ ಶಿಕ್ಷಣ ಪ್ರೀತಿಗೊಂದು ಸಲಾಂ

ಮಂಗಳೂರು: ಸಹಪಾಠಿಗಳ ಆಸರೆಯಲ್ಲಿ ವಿಕಲಚೇತನೆಗೆ ದೊರಕಿತು ಅಕ್ಷರದ ಅಕ್ಕರೆ; ಈಕೆಯ ಶಿಕ್ಷಣ ಪ್ರೀತಿಗೊಂದು ಸಲಾಂ


ಮಂಗಳೂರು: ವ್ಹೀಲ್ ಚೆಯರ್ ಹಾಗೂ ಇನ್ನೊಬ್ಬರ ಆಸರೆಯಿಲ್ಲದೆ ಈಕೆ ಏನೂ ಮಾಡಲು ಅಶಕ್ತಳು. ಆದರೆ ಈಕೆಯ ಶಿಕ್ಷಣ ಪ್ರೀತಿ ಮಾತ್ರ ಅಗಾಧವಾದದ್ದು. ಹಾಗಾಗಿಯೇ ಎಂತಹ ಕಷ್ಟ ಎದರಾದರೂ ಈಕೆ ಶಾಲೆ ತಪ್ಪಿಸೋಲ್ಲ. ಕಲಿಕೆಯಲ್ಲೂ ಸದಾ ಮುಂದು. ಇದು ಮೂವರು ಸಹಪಾಠಿ ವಿದ್ಯಾರ್ಥಿನಿಯರ ತೋಳ ಆಸರೆಯಲ್ಲಿ ವಿಕಲಚೇತನೆ ಬಾಲಕಿಯ ಅಕ್ಷರ ಅರಳಿದ ಕತೆ. 




ಹೌದು... ಹೀಗೆ ಶಾಲೆಗೆ ರಿಕ್ಷಾದಲ್ಲಿ ಬರುವ ಈ ವಿದ್ಯಾರ್ಥಿನಿಯನ್ನು ಮೂವರು ಸಹಪಾಠಿಗಳು ಅನಾಮತ್ತಾಗಿ ಎತ್ತಿ ವ್ಹೀಲ್ ಚೆಯರ್ ನಲ್ಲಿ ಕೂರಿಸಿ ತರಗತಿಗೆ ಕರೆದೊಯ್ಯುತ್ತಾರೆ. ಬಳಿಕ ಆಕೆಯನ್ನು ತರಗತಿ ಕೊಠಡಿಗೆ ಕರೆದೊಯ್ಯುತ್ತಾರೆ. ಬೆಳಗ್ಗಿನಿಂದ ಸಂಜೆ ಮನೆಗೆ ಹೋಗುವವರೆಗೆ ಆಕೆ ಈ ಮೂವರನ್ನೇ ಅವಲಂಬಿಸುತ್ತಾಳೆ. ಈ ಮೂವರು ಮಾತೃಹೃದಯಿ ಬಾಲಕಿಯರು ತಾಯಿಯಂತೆ ಆಕೆಯ ಸೇವೆ ಮಾಡುತ್ತಾರೆ. ಅಂದಹಾಗೆ ಈ ದೃಶ್ಯ ನಮಗೆ ನೋಡಲು ಸಿಗುವುದು ಕೊಣಾಜೆ ಪದವು ದ.ಕ.ಜಿಪಂ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ.

ಕೊಣಾಜೆ ನಿವಾಸಿ ಫಾತಿಮತ್ ನಿಶಾ ಹುಟ್ಟಿನಿಂದಲೇ ಕೈ ಹಾಗೂ ಕಾಲುಗಳ ಬಲಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಬಾಲಕಿ. ಆದರೂ ಕಲಿಕೆಯಲ್ಲಿ ಜಾಣೆ. ಈಕೆ ಶಾಲೆಯ ಆವರಣಕ್ಕೆ ರಿಕ್ಷಾದಲ್ಲಿ ಬರುತ್ತಿದ್ದಂತೆ ಸೌಜನ್ಯಾ, ನಫೀಸಾ ಸಮ್ರೀನಾ, ಫಾತಿಮತ್ ಸಫಿರಾ ಎಂಬ ಮೂವರು ವಿದ್ಯಾರ್ಥಿನಿಯರು ಆಸರೆಯಾಗುತ್ತಾರೆ‌. ಬೆಳಗ್ಗಿನಿಂದ ಸಂಜೆಯವರೆಗೆ ಈ ವಿದ್ಯಾರ್ಥಿನಿಯರೇ ತಾಯಿಯಂತೆ ಆಕೆಯ ಸೇವೆ ಮಾಡುತ್ತಾರೆ. ಸಂಜೆ ಫಾತಿಮತ್ ನಿಶಾಳನ್ನು ರಿಕ್ಷಾದಲ್ಲಿ ಮನೆಗೆ ಕಳುಹಿಸಿಕೊಟ್ಟ ಬಳಿಕವೇ ಈ ವಿದ್ಯಾರ್ಥಿನಿಯರು ತಮ್ಮ ಮನೆ ದಾರಿ ಹಿಡಿಯುತ್ತಾರೆ.

ತಂದೆಯನ್ನು ಕಳೆದುಕೊಂಡ ಫಾತಿಮತ್ ನಿಶಾಗೆ ತಾಯಿಯೇ ಆಸರೆ. ಅಜ್ಜಿ ಹಾಗೂ ಸೋದರ, ಸೋದರಿಯಿರುವ ಈಕೆಯ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾಗಿದೆ. ಈ ಕುಟುಂಬಕ್ಕೆ ತಾಯಿ ಬೀಡಿ ಕಟ್ಟಿ ಗಳಿಸುವ ಅಲ್ಪ ಆದಾಯವೇ ಜೀವನ ನಿರ್ವಹಣೆಗೆ ಆಧಾರ. ಏನೇ ಸಮಸ್ಯೆಗಳಿದ್ದರೂ ಶಿಕ್ಷಣ ಪಡೆಯಬೇಕು, ವೈದ್ಯೆಯಾಗಬೇಕೆಂಬುದು ಈಕೆಯ ಕನಸು. ಇದೀಗ 10ನೇ ತರಗತಿಯಲ್ಲಿರುವ ಮನೆಯಲ್ಲಿ ಕಷ್ಟಗಳಿದ್ದರೂ ನಿಶಾ ಶಿಕ್ಷಣ ಮೊಟಕುಗೊಳಿಸಿಲ್ಲ. ಶಾಲೆಯ ಶಿಕ್ಷಕರ ಆರ್ಥಿಕ ಹಾಗೂ ನೈತಿಕ ಬೆಂಬಲ ನಿಶಾಳ ಕನಸನ್ನು ನಿರಾತಂಕವಾಗಿ ಮುಂದುವರಿಸುವಂತೆ ಮಾಡಿತ್ತು.




ಒಟ್ಟಿನಲ್ಲಿ ಜೀವನದಲ್ಲಿ ಸಾಧನೆ ಮಾಡಬೇಕೆಂಬ ಈಕೆಯ ಕನಸನ್ನು ನೀರೆರೆದು ಪೋಷಿಸಿ ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವ ಈ ಮೂವರು ವಿದ್ಯಾರ್ಥಿನಿಯರ ಕಾರ್ಯಕ್ಕೊಂದು ಸಲಾಂ ಎನ್ನಲೇ ಬೇಕು. ಕೋಮು ವಿಚಾರದಲ್ಲಿ ಮನಸ್ಸು ಒಡೆಯುತ್ತಿರುವ ಈ ಕಾಲದಲ್ಲಿ ಈ ವಿದ್ಯಾರ್ಥಿನಿಯರ ಕಾರ್ಯ ಜಿಲ್ಲೆಯ ಜನತೆಗೆ ಮಾದರಿಯಾಗಿದೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಈ ವಿದ್ಯಾರ್ಥಿನಿಯ ಕನಸನ್ನು ನನಸು ಮಾಡುವ ಕೈ ಬೇಕಿದೆ.

ಫಾತಿಮತ್ ನಿಶಾ
ಬ್ಯಾಂಕ್ ಆಫ್ ಬರೋಡಾ
ಕೊಣಾಜೆ ಬ್ರ್ಯಾಂಚ್
ಖಾತೆ ನಂಬರ್- 84700100012451
IFSC Code: BARB0VJKNJE

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article