-->

ಮದುವೆ ಸಂಭ್ರಮದಲ್ಲಿದ್ದ ಯುವತಿಯ ಕತ್ತು ಸೀಳಿ ಹತ್ಯೆಗೈದ ಸೈಕೋ ಕಿಲ್ಲರ್...!

ಮದುವೆ ಸಂಭ್ರಮದಲ್ಲಿದ್ದ ಯುವತಿಯ ಕತ್ತು ಸೀಳಿ ಹತ್ಯೆಗೈದ ಸೈಕೋ ಕಿಲ್ಲರ್...!


ದಾವಣಗೆರೆ: ಸೈಕೋ ಕಿರಾತಕನೊಬ್ಬನ ಹುಚ್ಚಾಟಕ್ಕೆ ಅಮಾಯಕ ಯುವತಿಯೊಬ್ಬಳು ಅಮಾನುಷವಾಗಿ ಬಲಿಯಾಗಿದ್ದಾಳೆ. ಕೊಲೆ ಆರೋಪಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

ದಾವಣಗೆರಯ ವಿನೋಭ ನಗರದ ನಿವಾಸಿ ಮೃತಳ ಹೆಸರು ಚಾಂದ್ ಸುಲ್ತಾನ(28) ಮೃತಪಟ್ಟ ದುರ್ದೈವಿ. ಚಾಂದ್ ಸುಲ್ತಾನ ಕಡುಬಡತನದಲ್ಲಿ ಹುಟ್ಟಿ ಕಷ್ಟ ಪಟ್ಟು ಓದಿ ಎಂಕಾಂ ಪದವಿ ಪಡೆದಿದ್ದಳು. ಬಳಿಕ ನಗರದ ತೆರಿಗೆ ಸಲಹೆಗಾರ ಕೆ. ಮಹ್ಮದ್ ಭಾಷಾ ಅವರಲ್ಲಿ ಸಿ.ಎ. ಪದವಿಗೆ ತರಬೇತಿ ಪಡೆಯುತ್ತಿದ್ದಳು. ಪ್ರತಿಭಾವಂತೆಯಾದ ಚಾಂದ್ ಸುಲ್ತಾನಾಳ ಮದುವೆ ಮುಂದಿನ ತಿಂಗಳ ಆಕೆಯ ಸಹೋದ್ಯೋಗಿಯೊಂದಿಗೆ ನಿಶ್ಚಯವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಮದುವೆ ಸಂಭ್ರಮದಲ್ಲಿದ್ದ ಆಕೆಯನ್ನು ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬ ಸೈಕೋ ಕಿರಾತಕ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಚಾಂದ್ ಸುಲ್ತಾನಾಳನ್ನು ಮಾತನಾಡಿಸುವ ನೆಪದಲ್ಲಿ ಬಂದ ಆತ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. 

ಆರೋಪಿ ಸಾದತ್, ಮೃತ ಯುವತಿಗೆ ಸೋದರ ಸಂಬಂಧಿಯಾಗಿದ್ದ. ಐದು ವರ್ಷಗಳ ಹಿಂದೆ ಇವರಿಬ್ಬರಿಗೆ ಮದುವೆ ಮಾಡಲು ಮೃತ ಯುವತಿ ಮನೆಯವರು ನಿರ್ಧಾರಿಸಿದ್ದರು. ಅದರಂತೆ ಆಕೆಯ ಕುಟುಂಬಸ್ಥರು ಸಾದತ್ ಮನೆಗೆ ಹೋಗಿ ಆತನ ಕುಟುಂಬದ ಸದಸ್ಯರೊಂದಿಗೆ ಮದುವೆ ಪ್ರಸ್ತಾಪವನ್ನು ಅವರ ಮುಂದಿಟ್ಟಿದ್ದರು. ಈ ವೇಳೆ ಸಾದತ್ ಹಾಗೂ ಆತನ ಮನೆಯವರು ಈ ಮದುವೆಗೆ ಸಮ್ಮತಿ ನೀಡಿರಲಿಲ್ಲ. ಇದೀಗ ಚಾಂದ್ ಸುಲ್ತಾನಾಳ ಮದುವೆಯನ್ನು ಆಕೆಯ ಸಹೋದ್ಯೋಗಿಯೊಂದಿಗೆ ನಿಶ್ಚಯಿಸಿದ್ದರು.

ಆದರೆ ಕಳೆದ ಕೆಲ ತಿಂಗಳುಗಳಿಂದ ಆರೋಪಿ ಸಾದತ್ 'ನೀನು ನನ್ನನ್ನೇ ಮದುವೆಯಾಗಬೇಕು' ಎಂದು ಮೃತ ಯುವತಿ ಚಾಂದ್ ಸುಲ್ತಾನಳ ಹಿಂದೆ ಬಿದ್ದಿದ್ದಾನೆ. ಈ ಬಗ್ಗೆ ಆಕೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಮುಂದಿನ ತಿಂಗಳು ನಡೆಯಬೇಕಿದ್ದ ತನ್ನ ಮದುವೆಯತ್ತ ಗಮನಹರಿಸಿದ್ದಳು. ಆದರೆ ಇಂದು ಏಕಾಏಕಿ ಚಾಂದ್ ಸುಲ್ತಾನಾಳನ್ನು ಕತ್ತು ಸೀಳಿ, ಸಾದತ್ ಕೊಲೆ ಮಾಡಿದ್ದಾನೆ.

ಆರೋಪಿ ಸಾದತ್ ತನ್ನ ಮನೆಯಲ್ಲಿ ಚಾಂದ್ ಸುಲ್ತಾನಾಳನ್ನು ಹತ್ಯೆ ಮಾಡುವುದಾಗಿ ಹೇಳಿ ಹೊರಟಿದ್ದ. ಈ ವಿಚಾರವನ್ನು ಆರೋಪಿ ಕುಟುಂಬಸ್ಥರು ಚಾಂದ್ ಸುಲ್ತಾನ ಸಂಬಂಧಿಕರಿಗೆ ತಿಳಿಸಿದ್ದಾರೆ. ಆದರೆ ಇದು ಚಾಂದ್ ಸುಲ್ತಾನಾಳನ್ನು ತಲುಪುವ ಮೊದಲೇ ಆರೋಪಿ ತನ್ನ ಕೆಲಸ ಮಾಡಿ ಪೂರೈಸಿದ್ದ. ಕೊಲೆ ಮಾಡಿದ ಬಳಿಕ ತಾನು ಕೂಡಾ ವಿಷ ಸೇವಿಸಿ ಆತ್ಮಹತ್ಯೆಗೆ ಆರೋಪಿ ಸಾದತ್  ಮುಂದಾಗಿದ್ದಾನೆ. ಸದ್ಯ ಆರೋಪಿಗೆ ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬಡಾವಣೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article