-->
1000938341
ಮಾವನ ಮಾತಿನಿಂದ ರೊಚ್ಚಿಗೆದ್ದು ಪ್ರಿಯಕರನೊಂದಿಗೆ ಸೇರಿ ಹತ್ಯೆಯ ಸಂಚು ರೂಪಿಸಿದ ಸೊಸೆ

ಮಾವನ ಮಾತಿನಿಂದ ರೊಚ್ಚಿಗೆದ್ದು ಪ್ರಿಯಕರನೊಂದಿಗೆ ಸೇರಿ ಹತ್ಯೆಯ ಸಂಚು ರೂಪಿಸಿದ ಸೊಸೆ


ಕೊಚ್ಚಿ: ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದ ಮಾವನನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆಗೆ ಯತ್ನಿಸಿದ ಸೊಸೆಯನ್ನು ಪ್ರಿಯಕರನ ಸಹಿತ ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

ನೂರನಾಡಿನ ನಿವಾಸಿಗಳಾದ ಶ್ರೀಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ಬಿಪಿನ್ ಬಂಧಿತ ಆರೋಪಿಗಳು. ನವೆಂಬರ್ 29ರಂದು ಶ್ರೀಲಕ್ಷ್ಮೀಯ ಮಾವನ ಮನೆಯ ಸಮೀಪದಲ್ಲೇ ಮಾವ ರಾಜುವಿನ ಹತ್ಯೆಗೆ ಯತ್ನಿಸಲಾಗಿತ್ತು. ಅಂದು ಮುಖಪೂರ್ತಿ ಕಾಣದಂತಹ ಹೆಲ್ಮೆಟ್ ಧರಿಸಿ, ಬೈಕ್‌ನಲ್ಲಿ ಆಗಮಿಸಿದ್ದ ಯುವಕನೋರ್ವನು ವಾಕಿಂಗ್ ಮಾಡುತ್ತಿದ್ದ ರಾಜುವಿನ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿದ್ದ. ತನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಯಾರು ಎಂಬುದು ರಾಜುಗೆ ಮಾತ್ರ ತಿಳಿಯಲೇ ಇಲ್ಲ. ಗಂಭೀರವಾಗಿ ಗಾಯಗೊಂಡಿದ್ದ ರಾಜು ಅವರನ್ನು ಮಾವೆಲಿಕ್ಕರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ತಲೆಗೆ 15 ಹೊಲಿಗೆ ಹಾಕಲಾಗಿದೆ.

ಆ ಬಳಿಕ ನೀಡಿರುವ ದೂರಿನನ್ವಯ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ ನೂರನಾಡ್ ಪೊಲೀಸರು ತನಿಖೆ ಆರಂಭಿಸಿದರು. ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲು ಮುಂದಾದರೂ ಕೂಡ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಆದರೆ, ಸಂತ್ರಸ್ತ ರಾಜು ಮತ್ತು ಶ್ರೀಲಕ್ಷ್ಮೀ ನಡುವೆ ನಡೆದಿದ್ದ ಜಗಳದ ಸುಳಿವು ಹಿಡಿದು ಹೊರಟ ಪೊಲೀಸರಿಗೆ ಇಡೀ ಪ್ರಕರಣದ ಸಂಚು ರೂಪಿಸಿದವಳು ಶ್ರೀಲಕ್ಷ್ಮೀ ಎಂಬುದು ತಿಳಿದು ಬಂದಿದೆ.

ಮಾವನ ಮಾತಿನಿಂದ ರೊಚ್ಚಿಗೆದ್ದಿದ್ದ ಶ್ರೀಲಕ್ಷ್ಮೀ ಆತನನ್ನು ಮುಗಿಸಿಬಿಡಲು ಸಂಚು ರೂಪಿಸಿದ್ದಳು. ಅದಕ್ಕಾಗಿ ತನ್ನ ಪ್ರಿಯಕರ ಬಿಪಿನ್ ನನ್ನು ಸಂಪರ್ಕಿಸಿದ ಶ್ರೀಲಕ್ಷ್ಮೀ ತನ್ನ ಮಾವನನ್ನು ಮುಗಿಸುವಂತೆ ಹೇಳಿದ್ದಳು. ವಾಕಿಂಗ್‌ಗೆ ತೆರಳಿದ್ದ ರಾಜು ಮನೆಯ ಸಮೀಪ ಬರುತ್ತಿದ್ದಂತೆ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಬಿಪಿನ್, ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿ, ಅಲ್ಲಿಂದ ಪರಾರಿಯಾಗಿದ್ದನು. ತೀವ್ರ ವಿಚಾರಣೆಯ ಬಳಿಕ ಶ್ರೀಲಕ್ಷ್ಮೀ ತಪ್ಪೊಪ್ಪಿಕೊಂಡಿದ್ದು, ಆಕೆಯನ್ನು ಮತ್ತು ಆಕೆಯ ಪ್ರಿಯಕರನನ್ನು ನೂರನಾಡ್ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಮಾವೆಲಿಕ್ಕರದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article