ಬೆಂಗಳೂರು: ಫೇಸ್‌ಬುಕ್ ಸ್ನೇಹಿತನ ಮೇಲಿನ ನಂಬಿಕೆಯಿಂದ ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಬಂದಿದ್ದ ಯುವಕನನ್ನು ಕೆಲ ಪುಂಡು ಪೋಕರಿಗಳು ಅಪಹರಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 17ರ ಯುವಕನನ್ನು ಕಾಪಾಡಿದ್ದಾರೆ.
ಗುಜರಾತ್‌ನ ವಡೋದರಾ ನಗರ, ಮನಮೋಹನ್ ಗ್ರಾಮದ ನಿವಾಸಿ ಪ್ರವೀಣ್ ಕುಮಾರ್ (17) ಅಪಹರಣಕ್ಕೊಳಗಾದ ಯುವಕ. ಈತ ಹೊಸ ಬದುಕು ಕಟ್ಟಿಕೊಳ್ಳಲು ಉದ್ಯೋಗ ಅರಸಿಕೊಂಡು ಡಿ.10ರಂದು ಬೆಂಗಳೂರಿಗೆ ಬಂದಿದ್ದಾನೆ. ಈತನ ತಂದೆ ಒಂದು ದಿನವಾದರೂ ಇನ್ನೂ ಯಾವ ಕಾರಣಕ್ಕೆ ಫೋನ್ ಮಾಡಿಲ್ಲವೆಂದು ಅನುಮಾನಗೊಂಡು ಡಿ.12ರಂದು ಸಂಜೆ ಸುಮಾರು 07.30ಕ್ಕೆ ಪ್ರವೀಣ್ ಕುಮಾನಿಗೆ ಕರೆ ಮಾಡಿದ್ದಾರೆ. ಆಗ ಆತ 'ತನ್ನನ್ನು ಯಾರೋ ಐವರು ಅಪರಿಚಿತರು ಯಶವಂತಪುರ ರೈಲುನಿಲ್ದಾಣದಿಂದ ಕರೆದುಕೊಂಡು ಬಂದು ರೂಂ ಒಂದರಲ್ಲಿ ಕೂಡಿಹಾಕಿದ್ದಾರೆ' ಎಂದು ಪ್ರವೀಣ ತಿಳಿಸಿದ್ದ. ಆಗಲೇ ಪ್ರವೀಣ್ ಕುಮಾರ್ ಅಪಹರಣಗೊಂಡಿರೋದು ಬೆಳಕಿಗೆ ಬಂದಿದೆ.
ಇದಾದ ಕೆಲವೇ ಸಮಯದಲ್ಲಿ ಮತ್ತೊಂದು ನಂಬರ್‌ನಿಂದ ಪ್ರವೀಣ್ ಕುಮಾರ್ ತಂದೆ ಅರುಣ್ ಕುಮಾರ್‌ಗೆ ಕರೆ ಬಂದಿದ್ದು, 'ನೀವು 2 ಲಕ್ಷ ರೂ. ನಗದು ನಾವು ತಿಳಿಸುವ ಮೊಬೈಲ್ ನಂಬರ್‌ಗೆ ಫೋನ್ ಪೇ ಮಾಡಿದರೆ ನಿಮ್ಮ ಮಗನನ್ನು ಬಿಡುತ್ತೇವೆ' ಎಂದು ಹೇಳಿ ಬೆದರಿಸಿದ್ದಾರೆ. ಭಯಗೊಂಡ ತಂದೆ, ಅಪಹರಣಕಾರರು ತಿಳಿಸಿದ ಪೊನ್ ನಂಬರ್‌ಗೆ 40 ಸಾವಿರ ರೂಗಳನ್ನು ಫೋನ್ ಪೇ ಮಾಡಿದ್ದಾರೆ.
ಮತ್ತೊಮ್ಮೆ ಪೋನ್ ಮಾಡಿರುವ ಅಪಹರಣಕಾರರು '60 ಸಾವಿರ ರೂ.ವನ್ನು ಪೋನ್ ಪೇ ಮಾಡು. ಇಲ್ಲವಾದಲ್ಲ ನಿನ್ನ ಮಗನ ಕೈ ತುಂಡು ಮಾಡಿ ಎಸೆಯುತ್ತೇವೆ' ಎಂದಿದ್ದಾರೆ. ಗಾಬರಿಗೊಂಡ ಅರುಣ್ ಕುಮಾರ್, ತಕ್ಷಣ ಬೆಂಗಳೂರಿಗೆ ಬಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೊಂಡ ಬೆಂಗಳೂರು ದಂಡು ರೈಲ್ವೇ ಪೊಲೀಸ್ ವೃತ್ತ ನಿರೀಕ್ಷಕ ಜಿ. ಪ್ರಭಾಕರ ಪ್ರಕರಣದ ಪತ್ತೆಗಾಗಿ ಬೆಂಗಳೂರು ಗ್ರಾಮಾಂತರ ಪಿ.ಎಸ್.ಐ. ಎಂ. ಶಿವಕುಮಾರ್ ಮತ್ತು ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆಯ ಪಿ.ಎಸ್.ಐ. ಶರಣಬಸವರಾಜ ಆರಾಧರ ನೇತೃತ್ವದಲ್ಲಿ 2 ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.
ಕಾರ್ಯಾಚರಣೆ ನಡೆಸಿದ ವಿಶೇಷ ತಂಡಗಳು ಪ್ರಕರಣ ದಾಖಲಾದ 12 ಗಂಟೆಯೊಳಗೆ ಪ್ರಭಾತ್ ಎ (21). ಎಂಬಾತನನ್ನು ಪತ್ತೆಮಾಡಿ ಪ್ರವೀಣ್ ಕುಮಾರ್‌ನನ್ನು ರಕ್ಷಣೆ ಮಾಡಿದ್ದಾರೆ. ವಿಚಿತ್ರವೆಂದರೆ ಈತ ಓರ್ವ ಡಿಪ್ಲೊಮಾ ವಿದ್ಯಾರ್ಥಿ. ಈ ಪ್ರಭಾತ್ ನೀಡಿದ ಮಾಹಿತಿ ಮೇರೆಗೆ ರಂಗನಾಥ.ಕೆ (19) ಕುಶಾಲ್ ಟಿ.ಎಸ್ (19) ಎಂಬ ಆರೋಪಿಗಳನ್ನು ಸಹ 24 ಗಂಟೆಯೊಳಗೆ ಪತ್ತೆ ಮಾಡಿದ್ದಾರೆ.
ಬಿಹಾರ ಮೂಲದ ಪ್ರಭಾತ್ ಕುಟುಂಬ 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನಗರದ ಕಾಲೇಜಿನಲ್ಲಿ ಪ್ರಭಾತ್, ಡಿಪ್ಲೊಮಾ ಓದುತ್ತಿದ್ದ. ಕುಣಿಗಲ್ ಕಾಲೇಜಿನಲ್ಲಿ ರಂಗನಾಥ್, ಪಿಯುಸಿ ಓದುತ್ತಿದ್ದ. ಕುಶಾಲ್, ಎಸ್ಎಸ್ಎಲ್‌ಸಿ ಅರ್ಧಕ್ಕೆ ಬಿಟ್ಟು ಕೃಷಿ ಮಾಡುತ್ತಿದ್ದ. ಪ್ರಭಾತ್, ಕಾಲೇಜಿಗೆ ಹೋಗದೆ ಎಲ್ಲೆಡೆ ಸುತ್ತಾಡುವಾಗ ಈ ಇಬ್ಬರು ಸ್ನೇಹಿತರು ಪರಿಚಯವಾಗಿದ್ದರು.
ಮತ್ತೊಂದೆಡೆ ಬಿಹಾರದ ಪ್ರವೀಣ್, ಎಸ್ಎಸ್‌ಎಲ್‌ಸಿ ಓದಿ ಗುಜರಾತಿನ ಅಹಮದಾಬಾದ್‌ನ ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿದ್ದ. 25 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪ್ರಭಾತ್‌ಗೂ ಮತ್ತು ಪ್ರವೀಣ್‌ಗೆ ಪರಿಚಯವಾಗಿತ್ತು. ಇಬ್ಬರು ಬಿಹಾರವಾದ ಕಾರಣಕ್ಕೆ ಆತ್ಮೀಯತೆ ಬೆಳೆದಿತ್ತು. ಬಿಹಾರದಲ್ಲಿ ಪ್ರವೀಣ್, ಪಾಲಕರು ರೈತರಾಗಿದ್ದರು. ಇದನ್ನು ತಿಳಿದ ಪ್ರಭಾತ್, ತನ್ನ ಸ್ನೇಹಿತರೊಂದಿಗೆ ಸೇರಿ ಪ್ರವೀಣ್ ಕುಮಾರ್ ನನ್ನು ಬೆಂಗಳೂರಿಗೆ ಕರೆಸಿಕೊಂಡು ಅಪಹರಣ ಮಾಡಿ ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದಾನೆ. ಆದರೆ ಪೊಲೀಸರು ಪ್ರಕರಣವನ್ನು ಶೀಘ್ರದಲ್ಲೇ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.