ಆಕಸ್ಮಿಕವಾಗಿ ಬ್ಯಾಂಕ್ ಖಾತೆಗೆ ಜಮೆಯಾದ 4.26 ಕೋಟಿ ರೂ. ಹಣದಿಂದ ಐಷಾರಾಮಿ ಜೀವನ ನಡೆಸಿದ ಯುವಕ ಜೈಲುಪಾಲು


ಆಸ್ಟ್ರೇಲಿಯಾ: ಆಕಸ್ಮಿಕವಾಗಿ ತನ್ನ ಬ್ಯಾಂಕ್‌ ಖಾತೆಗೆ ಜಮಾ ಆಗಿರುವ ಯಾರದ್ದೋ ಹಣವನ್ನು ಖರ್ಚು ಮಾಡಿರುವ ಯುವಕನೊಬ್ಬ ಈಗ ಜೈಲು ಪಾಲಾಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ರ‍್ಯಾಪರ್ ಆಗಿರುವ 24 ವರ್ಷದ ಅಬ್ದೆಲ್ ಘಾಡಿಯಾ ಎಂಬಾತನೇ ಬಂಧನಕ್ಕೊಳಗಾದ ಯುವಕ.

ತಾರಾ ಥಾರ್ನೆ ಹಾಗೂ ಆಕೆಯ ಪತಿ ಕೋರಿ ಸಿಡ್ನಿಯಲ್ಲಿ ಮನೆ ಖರೀದಿಸಲೆಂದು 4.26 ಕೋಟಿ ರೂ. ಹಣವನ್ನು ಕೂಡಿಟ್ಟಿದ್ದರು. ಮನೆ ಖರೀದಿಸಲು ಅವರು ದಲ್ಲಾಳಿ ಆಡಮ್ ಮ್ಯಾಗ್ರೋ ಎಂಬಾತನೊಂದಿಗೆ ವ್ಯವಹಾರ ನಡೆಸಲು ಆರಂಭಿಸುತ್ತಾರೆ. ಆದರೆ ಕೆಲ ದಿನಗಳ ಬಳಿಕ ಆಡಮ್ ಮ್ಯಾಗ್ರೋ ಇಮೇಲ್‌ ಹ್ಯಾಕ್‌ ಆಗಿದೆ ಎಂದು ದಂಪತಿಗೆ ತಿಳಿಯುತ್ತದೆ.

ಆಗ ಅವರಿಗೆ ತಾವು ಕಳುಹಿಸಿರುವ ಹಣ ಯಾರಿಗೋ ಹೋಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಹಣ ಅಬ್ದೆಲ್ ಘಾಡಿಯಾ ಖಾತೆಗೆ ಜಮಾವಣೆ ಆಗಿರೋದು ತಿಳಿದು ಬಂದಿದೆ. ಅಬ್ದೆಲ್ ಘಾಡಿಯಾ ಈ ಹಣವನ್ನು ದುಬಾರಿ ಬಟ್ಟೆ ಹಾಗೂ ಚಿನ್ನದ ಬಿಸ್ಕೆಟ್‌ ಗಳನ್ನು, ಮೇಕಪ್‌ ಐಟಂಗಳನ್ನು ಖರೀದಿಸುತ್ತಾನೆ. ಇದೇ ದುಡ್ಡಿನಲ್ಲಿ ಆತ ಹಾಡುಗಳನ್ನು ಮಾಡುತ್ತಾನೆ. ಆಕಸ್ಮಿಕವಾಗಿ ಹಣವನ್ನು ಯಾರೋ ಹಾಕಿದ್ದಾರೆಂದು ಭಾವಿಸಿ ಎಲ್ಲವನ್ನೂ ಖರ್ಚು ಮಾಡಿ ಐಷಾರಾಮಿ ಜೀವನವನ್ನು ಸಾಗಿಸಿದ ಅಬ್ದೆಲ್‌ ನನ್ನು ಪೊಲೀಸರು ಬಂಧಿಸಿದ್ದಾರೆ.