-->
ತಾನು ಬಾಯಿಬಿಟ್ಟರೆ ಒಡಿಶಾ ರಾಜ್ಯದ ಚಿತ್ರಣವೇ ಬದಲಾಗಲಿದೆ: 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿರುವ ಲೇಡಿಯ ಸ್ಪೋಟಕ ಹೇಳಿಕೆ

ತಾನು ಬಾಯಿಬಿಟ್ಟರೆ ಒಡಿಶಾ ರಾಜ್ಯದ ಚಿತ್ರಣವೇ ಬದಲಾಗಲಿದೆ: 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿರುವ ಲೇಡಿಯ ಸ್ಪೋಟಕ ಹೇಳಿಕೆ

ಭುವನೇಶ್ವರ್: ಉನ್ನತ ಮಟ್ಟದ ವ್ಯಕ್ತಿಗಳಿಗೆ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಿರುವ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್‌ಮೇಲರ್ ಅರ್ಚನಾ ನಾಗ್, ತಾನು ಬಾಯಿ ಬಿಟ್ಟಲ್ಲಿ ಒಡಿಶಾದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾಳೆ.

ಅರ್ಚನಾಳ ಹನಿಟ್ರ್ಯಾಪ್‌ನಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ತನಿಖೆ ನಡೆಸುತ್ತಿದೆ. ಆರೋಪಿತೆ ಅರ್ಚನಾ ನಾಗ್ ಳನ್ನು 7 ದಿನಗಳ ಕಾಲ ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಆಕೆಯನ್ನು ವಿಚಾರಣೆಗೊಳಪಡಿಸುವ ಮುನ್ನ ಝಾರ್ಪದ ಜೈಲಿನಿಂದ ವೈದ್ಯಕೀಯ ತಪಾಸಣೆಗೆಂದು ಕ್ಯಾಪಿಟಲ್ ಹಾಸ್ಪಿಟಲ್‌ಗೆ ಕರೆದೊಯ್ಯಲಾಗಿತ್ತು. 

ಈ ವೇಳೆ ಸುದ್ದಿಮಾಧ್ಯದೊಂದಿಗೆ ಮಾತನಾಡಿದ ಅರ್ಚನಾ‌ ನಾಗ್, ಒಂದು ವೇಳೆ ತಾನೇನಾದರೂ ಬಾಯಿ ಬಿಟ್ಟಲ್ಲಿ ಒಡಿಶಾದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ. ಎಲ್ಲವನ್ನು ವಿವರಿಸಲು ನನಗೆ ಸಾಕಷ್ಟು ಕಾಲಾವಕಾಶ ಬೇಕಿದೆ. ಕನಿಷ್ಠ ಪಕ್ಷ ಅರ್ಧ ಗಂಟೆಗಳ ಕಾಲವಕಾಶ ನೀಡಿದ್ದಲ್ಲಿ ನಾನು ನಿಮಗೆ ಎಕ್ಲ್ಯೂಸಿವ್ ಸಾಕ್ಷಿಯನ್ನು ಕೊಡುತ್ತೇನೆ. ಈ ಪ್ರಕರಣದ‌ ಬಲೆಯಲ್ಲಿ ಬಿದ್ದಿದ್ದೇನೆ. ಆದರೆ, ನಾನು ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾಳೆ.

ಒಡಿಶಾ ಸಿನಿಮಾ ನಿರ್ಮಾಪಕ ಅಕ್ಷಯ ಪಾರಿಜಾ ತನ್ನ ವಿರುದ್ಧ ದೂರು ನೀಡಿದ ದಿನದಿಂದಲೂ ತನ್ನ ಸಹವರ್ತಿ ಶ್ರದ್ಧಾಂಜಲಿ ಬೆಹೆರಾ ಕರೆಯ ದಾಖಲೆಗಳನ್ನು ಇಡಿ ಪರಿಶೀಲಿಸಬೇಕು ಎಂದು ಅರ್ಚನಾ ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆಗಾಗಿ ಕಾಯುತ್ತಿದ್ದೇನೆ. ಇಡಿ ಅಧಿಕಾರಿಗಳ ತನಿಖೆಗಾಗಿ ಸಹಕರಿಸಲು ನಾನು ಸಂಪೂರ್ಣವಾಗಿ ತಯಾರಾಗಿದ್ದೇನೆ. ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ನಾನು ಯಾರನ್ನೂ ಬಿಡುವುದಿಲ್ಲ ಎಂದಿರುವ ಅರ್ಚನಾ ನಾಗ್, ನಾನು ಪ್ರಕರಣದಲ್ಲಿ ಸಿಕ್ಕಿಬಿದ್ದಿರುವಾಗ ಇಬ್ಬರು ವ್ಯಕ್ತಿಗಳು ಅದರ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಅವರು ಯಾರೆಂಬದನ್ನು ಆಕೆ ಬಾಯಿ ಬಿಟ್ಟಿಲ್ಲ.

ಯಾರು ಈ ಅರ್ಚನಾ?

ಅರ್ಚನಾ(26) ಓರ್ವ ಹನಿಟ್ರ್ಯಾಪ್ ಬ್ಲ್ಯಾಕ್ ಮೇಲರ್. ತನ್ನ ಹನಿಟ್ರ್ಯಾಪ್ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ಚಾಳಿಯಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಅರ್ಚನಾ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ. ಆ ಬಳಿಕದಿಂದ ಆಕೆಯ ಎಲ್ಲ ಪುರಾಣಗಳೆಲ್ಲಾ ಬಯಲಾಗುತ್ತಿದೆ.

ಅಂದ ಹಾಗೆ ಅರ್ಚನಾ ನಾಗ್, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್ ಬಲೆಗೆ ಕಡೆವಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್‌ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ. 2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಮನೆಯನ್ನು ಹೊಂದಿದ್ದಾಳೆ. ಈ ಮನೆಗಳ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article