-->

ಕಿಡ್ನಿ ಮಾರಾಟ ಮಾಡಲು ಹೋಗಿ 16 ಲಕ್ಷ ರೂ. ಕಳೆದುಕೊಂಡ ನರ್ಸಿಂಗ್ ವಿದ್ಯಾರ್ಥಿನಿ

ಕಿಡ್ನಿ ಮಾರಾಟ ಮಾಡಲು ಹೋಗಿ 16 ಲಕ್ಷ ರೂ. ಕಳೆದುಕೊಂಡ ನರ್ಸಿಂಗ್ ವಿದ್ಯಾರ್ಥಿನಿ

ವಿಜಯವಾಡ: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕಿಡ್ನಿ ಮಾರಾಟ ಮಾಡಲು ಹೋಗಿ 16 ಲಕ್ಷ ರೂ. ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 

ಹೈದರಾಬಾದ್‌ನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಗುಂಟೂರು ಮೂಲದ ನರ್ಸಿಂಗ್ ವಿದ್ಯಾರ್ಥಿನಿ ತಮ್ಮ ತಂದೆಯ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಪಡೆದಿದ್ದಳು. ಈ ಹಣವನ್ನು ಮರು ಪಾವತಿ ಮಾಡಲು ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದಳು. ಆದರೆ ಈ 2 ಲಕ್ಷ ರೂ. ಬದಲಿಗೆ ಈಗ 16 ಲಕ್ಷ ರೂ. ಸೈಬರ್ ವಂಚಕರ ಪಾಲಾಗಿದೆ. ಮೋಸ ಹೋಗಿರುವ ವಿದ್ಯಾರ್ಥಿನಿ ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. 

ವಿದ್ಯಾರ್ಥಿನಿಯು ಕಿಡ್ನಿ ಮಾರಲು ಮುಂದಾದ ವೇಳೆ ಕೆಲವರು ಆಕೆಗೆ 3 ಕೋಟಿ ರೂ. ನೀಡುವುದಾಗಿ ಆಫರ್ ನೀಡಿದ್ದರು. ಆದರೆ, ಅದಕ್ಕೂ ಮುನ್ನ ನೀವು ತೆರಿಗೆ ಮತ್ತು ಪೊಲೀಸ್ ದೃಢೀಕರಣ ವೆಚ್ಚಕ್ಕಾಗಿ 16 ಲಕ್ಷ ರೂ. ಪಾವತಿಸಬೇಕು ಎಂದು ಹೇಳಿದ್ದಾರೆ. ಅದನ್ನು ನಂಬಿದ ವಿದ್ಯಾರ್ಥಿನಿ ಹೇಗೋ ದುಡ್ಡು ಹೊಂದಿಸಿ 16 ಲಕ್ಷ ರೂ. ಪಾವತಿಸಿದ್ದಾಳೆ.

ಈ ವಿದ್ಯಾರ್ಥಿನಿಯು ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್ ರಾಜ್ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದಳು. ಆತ, ''ಶಸ್ತ್ರಚಿಕಿತ್ಸೆಗೂ ಮುನ್ನ ಶೇ.50ರಷ್ಟು ಹಣವನ್ನು ನೀಡುತ್ತೇವೆ. ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಉಳಿದ ಹಣವನ್ನು ನೀಡುತ್ತೇವೆ'' ಎಂದು ಹೇಳಿದ್ದನು. ಪ್ರವೀಣ್ ರಾಜ್‌ ಸಹಚರರು ಚೆನ್ನೈನ ಸಿಟಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅನುಮಾನ ಬಾರದಿರಲಿ ಎಂದು ಅದರಲ್ಲಿ 3 ಕೋಟಿ ರೂ. ಜಮೆ ಮಾಡಿದ್ದರು. ಸಂತ್ರಸ್ತ ವಿದ್ಯಾರ್ಥಿನಿ, ಅದನ್ನು ನಂಬಿ ಆ ಬ್ಯಾಂಕ್ ಖಾತೆಗೆ 16 ಲಕ್ಷ ರೂ. ಜಮೆ ಮಾಡಿದ್ದಳು. ಆದರೆ ಬಳಿಕ ಹಣ ವಾಪಸ್ ಕೇಳಿದಾಗ, ದಿಲ್ಲಿಗೆ ಹೋಗಿ ಹಣ ಸಂಗ್ರಹಿಸಿಕೊಳ್ಳುವಂತೆ ವಿಳಾಸವೊಂದನ್ನು ನೀಡಿದ್ದಾರೆ. ಆದರೆ, ದಿಲ್ಲಿಗೆ ಹೋಗಿ ವಿಚಾರಿಸಿದರೆ ಅದು ನಕಲಿ ವಿಳಾಸ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಪೊಲೀಸ್ ದೂರು ದಾಖಲಿಸಿದ್ದಾಳೆ.

Ads on article

Advertise in articles 1

advertising articles 2

Advertise under the article